ದೈಹಿಕ-ಮಾನಸಿಕ ಸದೃಢತೆಗೆ ಕ್ರೀಡೆ ಪೂರಕ

ಪಾವಗಡ, ಜು. ೨೩- ಕ್ರೀಡೆಯಲ್ಲಿ ಪಾಲ್ಗೊಂಡರೆ ಸದೃಢವಾದ ದೇಹ, ಮನಸ್ಸು ಹೊಂದಲು ಸಾಧ್ಯವಾಗುತ್ತದೆ ಎಂದು ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಕಾರ್ಯದರ್ಶಿ ಡಾ. ಜಿ.ವೆಂಕಟರಾಮಯ್ಯ ತಿಳಿಸಿದರು.
ಪಟ್ಟಣದ ಗುರುಭವನದ ಪಕ್ಕದಲ್ಲಿರುವ ಸರ್ಕಾರಿ ಮಾದರಿ ಪಾಠಶಾಲಾ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸ್ವಾಮಿ ವಿವೇಕಾಂದ ಗ್ರಾಮಾಂತರ ಪ್ರೌಢಶಾಲಾ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ನಾಗಲಮಡಿಕೆ ಹೋಬಳಿಯ ಪ್ರೌಢಶಾಲಾ ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸೋತವರು ಕುಗ್ಗದೆ, ಗೆದ್ದವರು ಹಿಗ್ಗದೆ ಕ್ರೀಡಾ ಸ್ಪೂರ್ತಿಯಿಂದ ಕ್ರೀಡೆಗಳಲ್ಲಿ ಭಾಗವಹಿಸಬೇಕು. ವಿದ್ಯಾರ್ಥಿಗಳು ಪಾಠದ ಜತೆ, ಆಟಗಳಲ್ಲಿ ತೊಡಗಿಸಿಕೊಂಡು ತಮ್ಮ ಪ್ರತಿಭೆಯನ್ನು ಹೊರಹೊಮ್ಮಿಸಬೇಕು. ಹೋಬಳಿ, ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗೆದ್ದು ಪಾವಗಡ ತಾಲ್ಲೂಕಿನ ಕಿರ್ತಿಯನ್ನು ಹೆಚ್ಚಿಸಬೇಕು ಎಂದು ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.
ಬಿಇಒ ಅಶ್ವತ್ಥ್‌ನಾರಾಯಣ ಮಾತನಾಡಿ, ಕಳೆದರೆಡು ವರ್ಷಗಳಿಂದ ಕೊರೊನಾ ಕಾರಣದಿಂದ ಕ್ರೀಡೆಗಳಿಂದ ಮಕ್ಕಳು ದೂರವಾಗಿದ್ದರು. ಅದರೆ ಈ ಬಾರಿ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯಿಂದ ಕ್ರೀಡೆಗಳಲ್ಲಿ ಭಾಗವಹಿಸಿ, ಸೋಲು-ಗೆಲುವುಗಳನ್ನು ಸಮಾನಾಗಿ ಸ್ವೀಕರಿಸಿ ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ನಾಗಲಮಡಿಕೆ ಶಾಲೆಯ ಮುಖ್ಯ ಶಿಕ್ಷಕ ಕಟ್ಟಾನರಸಿಂಹಮೂರ್ತಿ, ದೈಹಿಕ ಶಿಕ್ಷಣ ನಿರ್ದೇಶಕ ಚಿದಾನಂದಸ್ವಾಮಿ, ದೈಹಿಕ ಶಿಕ್ಷಕ ಬಸವರಾಜು, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕರಿಯಣ್ಣ, ರಾಜ್ಯ ಸಂಘಟನಾ ಕಾರ್ಯದಶಿ ಶಾಂತರಾಜು, ವಿಜಯಕುಮಾರ್, ಶಿಕ್ಷಣ ಸಂಯೋಜಕರಾದ ಶಿವಕುಮಾರ್, ರಂಗನಾಥ್, ಚಂದ್ರಶೇಖರ್, ದೈಹಿಕ ಶಿಕ್ಷಕರಾದ ಅಪ್ಸರ್‌ಖಾನ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.