ದೈಹಿಕ ಆರೋಗ್ಯಕ್ಕೆ ಸ್ವಚ್ಛತೆ ಅಗತ್ಯ

ಭಾಲ್ಕಿ:ಮಾ.17:ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಸ್ವಚ್ಛತೆ ಅತ್ಯಂತ ಮುಖ್ಯವಾಗಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ ಹೇಳಿದರು.
ಪಟ್ಟಣದ ವಾರ್ಡ್ ನಂ.01ರಲ್ಲಿ ಮನೆ-ಮನೆಗೆ ತೆರಳಿ ಕಸ ತುಂಬುವ ಬಕೆಟ್‍ಗಳನ್ನು ವಿತರಿಸಿ ಮಾತನಾಡಿದ ಅವರು,ಶಾಸಕ ಈಶ್ವರ ಖಂಡ್ರೆ ಅವರ ನಿರ್ದೇಶನದ ಮೆರೆಗೆ ಪಟ್ಟಣದ ಎಲ್ಲ ವಾರ್ಡ್‍ಗಳಿಗೆ ಕಸ ತುಂಬುವ ಬಕೆಟ್‍ಗಳನ್ನು ವಿತರಿಸಲಾಗುತ್ತಿದೆ.ದೇಹ, ಮನಸ್ಸು, ಆತ್ಮ, ಬುದ್ಧಿ ಮತ್ತು ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮಾನವ ಜೀವನದ ಪ್ರಮುಖ ಕಾರ್ಯವಾಗಿದೆ. ಸಾಂಕ್ರಾಮಿಕ ರೋಗಗಳು ಮತ್ತು ವೈರಸ್‍ಗಳಿಂದ ದೂರವಿರಲು ಸ್ವಚ್ಛತೆ ಕಾಪಾಡುವುದು ಪ್ರಥಮ ಹೆಜ್ಜೆಯಾಗಿದೆ. ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿದೆ. ಸ್ವಚ್ಛತೆಯನ್ನು ಗಮನದಲ್ಲಿಟ್ಟುಕೊಂಡು ನಮ್ಮ ಮನೆಯ ಸುತ್ತ ಎಲ್ಲೆಂದರಲ್ಲಿ ಕಸ ಎಸೆಯದೆ ಕಸದ ಬಕೆಟ್‍ಗಳನ್ನು ಬಳಸಬೇಕು. ಸ್ವಚ್ಛತೆಗೆ ಪ್ರಥಮಾದ್ಯತೆ ನೀಡುವುದರಿಂದ ರೋಗಮುಕ್ತ ಕ್ಷೇತ್ರ, ರಾಜ್ಯ, ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗಲಿದೆ.ಓಣಿಯ ಜನ ಮನೆಯಲ್ಲಿನ ಕಸ ರಸ್ತೆ ಮೇಲೆ ಬೀಸಾಡದೆ ಪುರಸಭೆ ವತಿಯಿಂದ ನೀಡಲಾದ ಕಸದ ಡಬ್ಬಿಗಳ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯರು ಉಪಸ್ಥಿತರಿದ್ದರು.