ದೈವೀ ಗುಣಗಳ ಬೆಳೆಗೆ ಸುಜ್ಞಾನವೇ ಭೂಮಿ : ರಂಭಾಪುರಿ ಶ್ರೀ ಬಾಳೆ

ಹೊನ್ನೂರು.ಮೇ-26 ಕ್ರಿಯಾಶೀಲ ಬದುಕಿಗೆ ಸ್ಫೂರ್ತಿಯಾಗಬಲ್ಲ ಗುಣ ಸಿರಿಯನ್ನು ಮನುಷ್ಯ ಗಳಿಸಬೇಕು. ಭೂಮಿಯಲ್ಲಿ ಬೇವು ಬಿತ್ತಬಹುದು ಮಾವು ಬಿತ್ತಬಹುದು. ಆದರೆ ಬಿತ್ತಿದ್ದು ಬೆಳೆಯುತ್ತದೆ. ದೈವೀ ಗುಣಗಳ ಬೆಳೆಗೆ ಸುಜ್ಞಾನವೇ ಭೂಮಿಯಾಗಿದೆ ಎಂದು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು. ಅವರು ಶ್ರೀ ರಂಭಾಪುರಿ ಪೀಠದಲ್ಲಿ ಆಗೀ ಹುಣ್ಣಿಮೆ ನಿಮಿತ್ಯ ಕರೋನಾ ಸೋಂಕು ನಿಯಂತ್ರಣ ನಿರ್ಮೂಲನೆಗಾಗಿ ಸಂಕಲ್ಪ ಮಾಡಿ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿ ಆಶೀರ್ವಚನ ನೀಡಿದರು. ಮನಸ್ಸು ಇಲ್ಲದಿದ್ದರೆ ಮನುಷ್ಯನಿಗೆ ಪ್ರಪಂಚವೂ ಇಲ್ಲ ಪಾರಮಾರ್ಥವು ಇಲ್ಲ. ಲೌಕಿಕ ಬದುಕಿಗೂ ಅಲೌಕಿಕ ಬಂಧ ಮೋಕ್ಷಕ್ಕೂ ಮನವೇ ಮೂಲ. ದೇಹ ಸಿರಿ, ಭಾವ ಸಿರಿ, ವಿಚಾರ ಸಿರಿ, ಶಾಂತಿ ಸಿರಿ ಮತ್ತು ಆನಂದ ಸಿರಿ ಮನುಷ್ಯ ಜೀವನದಲ್ಲಿ ಸಂಪಾದಿಸಬೇಕು. ಕೊರತೆಯನ್ನೆಲ್ಲ ಕಳೆದು ನಿತ್ಯ ತೃಪ್ತರನ್ನಾಗಿ ಮಾಡುವುದೇ ನಿಜ ಸಿರಿಯಾಗಿದೆ. ಮನುಷ್ಯನ ಮನಸ್ಸು ಕಸದ ತೊಟ್ಟಿಯಂತಾಗಿದೆ. ಊರ ಮುಂದಿನ ಕಸದ ತೊಟ್ಟಿ ವಾರಕ್ಕೊಮ್ಮೆಯಾದರೂ ಖಾಲಿ ಮಾಡುತ್ತಾರೆ. ಹುಟ್ಟಿದಾರಭ್ಯದಿಂದ ಹಿಡಿದು ಇಂದಿನ ವರೆಗೆ ಮನದ ಕಳೆಯನ್ನು ಕಳೆಯುವ ಗೋಜಿಗೆ ಹೋಗಲೆಯಿಲ್ಲ. ಕಣ್ಣಿನಲ್ಲಿ ಕಳೆ ಮುಖದಲ್ಲಿ ಪ್ರಸನ್ನತೆ, ಬದುಕಿನಲ್ಲಿ ಒಲವು ಮತ್ತು ಬುದ್ಧಿಯಲ್ಲಿ ಬಲವು ಸಂಪಾದಿಸಲು ಆಧ್ಯಾತ್ಮದ ಅರಿವು ಮತ್ತು ಗುರುವಿನ ಜ್ಞಾನಾಮೃತ ಅವಶ್ಯಕತೆಯಿದೆ. ನಾಡಿನೆಲ್ಲೆಡೆ ಕರೋನಾ ಸೋಂಕು ವ್ಯಾಪಿಸಿ ಜೀವ ಸಂಕುಲಕ್ಕೆ ಅಪಾಯ ತಂದೊಡ್ಡಿದೆ. ವೈದ್ಯಕೀಯ ಸಂಪನ್ಮೂಲಗಳಿದ್ದರೂ ಸಕಾಲಕ್ಕೆ ದೊರಕದೇ ಅಪಾರ ಸಂಖ್ಯೆಯಲ್ಲಿ ಮೃತ್ಯುವಿಗೆ ತುತ್ತಾಗುತ್ತಿದ್ದಾರೆ. ಉಸಿರಾಟದ ತೊಂದರೆಯಿAದ ಮತ್ತು ಬೇರೆ ಬೇರೆ ಕಾಯಿಲೆಗಳ ಹಿನ್ನೆಲೆಯಲ್ಲಿ ಮರಣಗಳು ಹೆಚ್ಚುತ್ತಿರುವುದು ದು:ಖದ ಸಂಗತಿ. ಪ್ರಕೃತಿ ಸಮತೋಲನ ಕಾಪಾಡುವ, ಮರ ಗಿಡಗಳನ್ನು ಸಂರಕ್ಷಿಸುವ ಕೆಲಸ ಎಲ್ಲರಿಂದಲೂ ಆಗಬೇಕಾಗಿದೆ. ಮನುಷ್ಯ ಆಚಾರ ಸಂಹಿತೆ ಅನುಸರಿಸಿ ತಾಳ್ಮೆಯಿಂದ ಬದುಕುವುದನ್ನು ಕಲಿಯಬೇಕೇ ವಿನ: ಪರಿಪಾಲನೆ ಮರೆತು ನಿರ್ಲಕ್ಷö್ಯ ಮಾಡಬಾರದೆಂದರು.