ದೈನಂದಿನ ಒತ್ತಡ ನಿವಾರಣೆಗೆ ಕ್ರೀಡೆ ಅಗತ್ಯ

ಧಾರವಾಡ,ಮೇ.29: ನಗರದ ಮಲ್ಲಸಜ್ಜನ ವ್ಯಾಯಾಮ ಶಾಲೆ ಆವರಣದಲ್ಲಿ ಭಾರತೀಯ ವೈದ್ಯಕೀಯ ಸಂಘ ಧಾರವಾಡ ವಿಭಾಗದಿಂದಿ ಆಯೋಜಿಸಿದ್ದ ವಾರ್ಷಿಕ ಕ್ರೀಡೆಗೆ ಜಿಲ್ಲಾ ವೈದ್ಯಾಧಿಕಾರಿ ಡಾ. ಶಶಿ ಪಾಟೀಲ, ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕ್ರೀಡಾಪಟು ಅಭಿಷೇಕ ಯಲಿಗಾರ ಚಾಲನೆ ನೀಡಿದರು.
ಡಿಎಚ್‍ಒ ಡಾ. ಶಶಿ ಪಾಟೀಲ ಮಾತನಾಡಿ, ಕ್ರೀಡಾಕೂಟದಲ್ಲಿ ವೈದ್ಯರು ಮತ್ತು ಅವರ ಪರಿವಾರ ಭಾಗವಹಿಸಿದ್ದು ಉತ್ತಮ ಬೆಳವಣಿಗೆಯಾಗಿದೆ. ಈ ರೀತಿಯ ಕ್ರೀಡಾಕೂಟಗಳು ವೈದ್ಯರಿಗೆ ತಮ್ಮ ದೈನಂದಿನ ಒತ್ತಡ ನಿವಾರಿಸಲು ಹಾಗೂ ಸಹ ವೃತ್ತಿವರರೊಡನೆ ಉತ್ತಮ ಬಾಂಧವ್ಯ ಬೆಳೆಸಲು ಸಹಾಯಕವಾಗುತ್ತದೆ ಎಂದರು.
ಕ್ರೀಡಾಪಟು ಅಭಿಷೇಕ ಯಲಿಗಾರ ಮಾತನಾಡಿ, ಒಬ್ಬ ವ್ಯಕ್ತಿಯೊಂದಿಗೆ ಒಂದು ವರ್ಷ ಮಾತನಾಡುವುದಕ್ಕಿಂತಲೂ ಅವನೊಂದಿಗೆ ಒಂದು ಗಂಟೆ ಆಟವಾಡುವುದರಿಂದ ಅವನನ್ನು ಹೆಚ್ಚು ಅರ್ಥ ಮಾಡಿಕೊಳ್ಳಬಹುದು. 65 ವರ್ಷ ಮೇಲ್ಪಟ್ಟ ವೈದ್ಯರು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಒಂದು ವಿಶೇಷ ಎಂದರು.
ಭಾರತೀಯ ವೈದ್ಯಕೀಯ ಸಂಘ ಧಾರವಾಡ ಘಟಕದ ಅಧ್ಯಕ್ಷ ಡಾ. ಸತೀಶ ಇರಕಲ್ ಮಾತನಾಡಿ, ನ್ಯಾಯ ಸಮ್ಮತ ಆಟವು ಒಳ್ಳೆಯ ನಡತೆಯ ಒಂದು ಭಾಗವಾಗಿದೆ. ಗೆಲುವು, ಸೋಲು ವ್ಯಕ್ತಿಗೆ ಸೌಜನ್ಯವಾಗಿರುವುದನ್ನು ಕಲಿಸುತ್ತದೆ ಎಂದರು.
ಭಾರತೀಯ ವೈದ್ಯಕೀಯ ಸಂಘದ ಮಹಿಳಾ ವಿಭಾಗದ ಚೇರ್ಮನ್ ಡಾ. ಕವಿತಾ ಮಂಕಣಿ, ಡಾ. ವಾಣಿ ಇರಕಲ್, ಡಾ. ಆಲೂರ, ಜಗದೀಶ ನಿರಡಿ, ಡಾ. ಅಮೃತ ಮಹಾ ಬಲಶೆಟ್ಟಿ, ಡಾ. ತೃಪ್ತಿ, ಡಾ. ಮೃದುಲಾ, ಡಾ. ಎಂ.ಎಂ. ಹಿರೇಮಠ, ಡಾ. ವಿಜಯಾ ನಾಡಕರ್ಣಿ ಇತರರು ಇದ್ದರು.