ದೇಹ ಮನಸ್ಸುಗಳ ಆರೋಗ್ಯಕ್ಕೆ ಸಾತ್ವಿಕ ಆಹಾರ ಶ್ರೇಷ್ಠ

ದಾವಣಗೆರೆ.ಮಾ.3. ಪ್ರತಿಯೊಬ್ಬ ಜೀವಿಗೂ ಆಹಾರ ಸ್ವಾತಂತ್ರ್ಯ ಇದೆಯಾದರೂ ದೇಹ ಮತ್ತು ಮನಸ್ಸಿನ ಆರೋಗ್ಯಕ್ಕೆ ಸಾತ್ವಿಕ ಆಹಾರಗಳನ್ನು ಸೇವಿಸುವುದು ಉತ್ತಮ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ ಅಭಿಪ್ರಾಯ ಪಟ್ಟರು.ಅವರು ದೇವನಗರಿ ಮೈತ್ರೇಯ ಪಿರಮಿಡ್ ಧ್ಯಾನ  ಕೇಂದ್ರದ ವತಿಯಿಂದ ಏರ್ಪಾಡಾಗಿದ್ದ ಸಸ್ಯಾಹಾರ ಜನಜಾಗೃತಿ ಜಾಥಾ  ಅಂಗವಾಗಿ ರೋಟರಿ ಹಾಲ್  ನಲ್ಲಿ ಏರ್ಪಾಡಾಗಿದ್ದ ಸಭೆಯ ವಿಶೇಷ ಆಹ್ವಾನಿತರಾಗಿ ಮಾತನಾಡುತ್ತಾ ಪ್ರಪಂಚದಲ್ಲಿ ಅತಿ ಹೆಚ್ಚು ಶೇಕಡವಾರು ಪ್ರಮಾಣದಲ್ಲಿ ಸಸ್ಯಾಹಾರಿಗಳಿರುವ ದೇಶ ಭಾರತವಾಗಿದ್ದು ವಿಶ್ವದಲ್ಲಿ ಕಡಿಮೆ ಪ್ರಮಾಣದ ಮಾಂಸಾಹಾರ ಬಳಸುವ ದೇಶವೂ ಭಾರತವಾಗಿದೆ, ನಮ್ಮ ದೇಶದಲ್ಲಿ ಶೇಕಡ 39 ರಷ್ಟು ಪೂರ್ಣ ಸಸ್ಯಾಹಾರಿಗಳೇ ಇದ್ದಾರೆ, ಶೇಕಡ 61 ರಷ್ಟು ಮಾಂಸಾಹಾರಿ ಗಳಿದ್ದರೂ ಅವರೂ ಸಹಾ ಹೆಚ್ಚಿನ ಪ್ರಮಾಣದಲ್ಲಿ ಸಸ್ಯಹಾರಗಳನ್ನೇ ಬಳಸುವವರೂ ಆಗಿದ್ದಾರೆ, ಭಾರತ ಬಿಟ್ಟರೆ ವಿಶ್ವದಲ್ಲಿ ತೈವಾನ್ ಹಾಗೂ ಇಸ್ರೇಲ್ ದೇಶಗಳಲ್ಲಿ ಶೇಕಡಾ 13ರಷ್ಟು ಸಸ್ಯಹಾರಿಗಳಿದ್ದು ಇಟಲಿ  ಮತ್ತು ಸ್ವೀಡನ್ ನಲ್ಲಿ ಶೇಕಡಾ 10 ರಷ್ಟು  ಸಸ್ಯಾಹಾರಿಗಳಿದ್ದಾರೆ, ಸಸ್ಯಾಹಾರ ಸೇವನೆಯಿಂದ ಸಾತ್ವಿಕ ಭಾವನೆಗಳು ಉಂಟಾಗುತ್ತವೆ, ಇದು ಆರೋಗ್ಯಕ್ಕೂ ಪೂರಕವಾಗಿದೆ ಎಂಬುದು ವಿಶ್ವದ ಅನೇಕ ಆಹಾರ ತಜ್ಞರ ಅಭಿಪ್ರಾಯವೂ ಆಗಿದೆ ಎಂದ ಎಚ್ ಬಿ ಮಂಜುನಾಥ್ ಸಸ್ಯಹಾರಿಗಳ ಸಂಖ್ಯೆ ಹೆಚ್ಚಾದರೆ ಆಹಾರದ ಕೊರತೆಯಾಗಬಹುದೆಂಬ ಆತಂಕ ಬೇಡ, ಕಾರಣ ಒಂದು ಕೆಜಿ ಮಾಂಸ ಉತ್ಪತ್ತಿಯಾಗಲು ಕನಿಷ್ಠ 3 ರಿಂದ 7 ಕೆಜಿ ಯಷ್ಟು  ದವಸಧಾನ್ಯ ಹಾಗೂ ಕನಿಷ್ಠ 10 ರಿಂದ 80 ಕೆಜಿ ಯಷ್ಟು ಸಸ್ಯಗಳು ಮೂಲಗಳು ಪ್ರಾಣಿಗಳಿಗೆ ಬೇಕು ಎಂಬ ಲೆಕ್ಕಾಚಾರವೂ ಇದೆ ಎಂದರಲ್ಲದೆ ಕೇವಲ ಸಸ್ಯಾಹಾರದಿಂದ ಕೆಲ ಜೀವ ಸತ್ವಗಳು ಹಾಗೂ ಪೋಷಕಾಂಶಗಳು ಸಿಗಲಿಕ್ಕಿಲ್ಲ ಎಂಬ ಆತಂಕವೂ ಬೇಡ,  ಎಲ್ಲಾ ಅಗತ್ಯ ಜೀವ ಸತ್ವ ಹಾಗೂ ಪೋಷಕಾಂಶಗಳನ್ನು ಒದಗಿಸುವ ವೈವಿಧ್ಯಮಯ ಸಸ್ಯ ಜನ್ಯ ಆಹಾರಗಳಿಗೆ  ವಿಶ್ವದಲ್ಲಿ ಅದರಲ್ಲೂ ಭಾರತದಲ್ಲಿ ಕೊರತೆ ಇಲ್ಲ ಎಂದರು. ಮಾಂಸಾಹಾರಿ ಪ್ರಾಣಿಗಳು ಸಹಾ ಸಸ್ಯಾಹಾರಿ  ಪ್ರಾಣಿಗಳ ಮಾಂಸವನ್ನೇ ಸೇವಿಸುತ್ತವೆ ವಿನಹ ಮಾಂಸಾಹಾರಿ ಪ್ರಾಣಿಗಳನ್ನು ಸೇವಿಸುವುದಿಲ್ಲ ಎಂದರು. ನಮ್ಮ ಸನಾತನ ವೇದಾದಿ ಸಾಹಿತ್ಯಗಳು ಭಗವದ್ಗೀತೆ ಸಹಾ ಸಾತ್ವಿಕ ಆಹಾರವನ್ನೇ  ಸಮರ್ಥಿಸುತ್ತಿದ್ದು ಮಾಂಸಾಹಾರವನ್ನು ತ್ಯಜಿಸಿದಲ್ಲಿ ಸಿಗುವ ಪುಣ್ಯಗಳ ಬಗ್ಗೆ ವಿಷ್ಣುಧರ್ಮೋತ್ತರ  ಪುರಾಣದಲ್ಲಿ ಉಲ್ಲೇಖಿಸಲಾಗಿದೆ ಎಂದೂ ಎಚ್ ಬಿ ಮಂಜುನಾಥ್ ಹೇಳಿದರು.ಡಿವೈಎಸ್ಪಿ ಬೆರಳಚ್ಚುತಜ್ಞ ರುದ್ರೇಶ್, ಮಹಾನಗರ ಪಾಲಿಕೆ ಸದಸ್ಯ ಕೆ ಎಮ್  ವೀರೇಶ್, ನಿವೃತ್ತ ಎಕ್ಸಿಕ್ಯೂಟಿವ್  ಇಂಜಿನಿಯರ್ ಕೆ ಆರ್ ಶೇಖರಪ್ಪ, ಕರ್ನಾಟಕ ಪಿರಮಿಡ್ ಮೂಮೆಂಟ್ ನ ಸಂಸ್ಥಾಪಕಿ ಸುಮಂಗಲಾ, ಅಧ್ಯಾತ್ಮ ಚಿಂತಕ ಬರಹಗಾರ  ಕಣಜನಹಳ್ಳಿ ನಾಗರಾಜ್, ಗೌರಿಶಂಕರ್,ಗೌರೀಶ್  ಮುಂತಾದವರು ಮಾತನಾಡಿ ಸಸ್ಯಾಹಾರದ ಮಹತ್ವ ಹಾಗೂ ಪಿರಮಿಡ್ ಧ್ಯಾನದ ವಿಶೇಷತೆ ವಿವರಿಸಿದರು.  ಕೃಷ್ಣಕುಮಾರ್, ಜಯಾ ಸುರೇಶ್ ಮುಂತಾದವರು ಉಪಸ್ಥಿತರಿದ್ದರು. ಎನ್ ಸಿದ್ಧಾರೂಢ ಸ್ವಾಮಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಗೀತಾರಾಮ್ ಹಾಗೂ ಮಂಗಳಮ್ಮ ಸಂಗಡಿಗರು ಹಾಡಿದರೆ ಸ್ವಾಗತವನ್ನು ಕೆ ಜಿ ಮಾರುತಿ ರಾಮ್  ಕೋರಿದರು.  ನಗರದಲ್ಲಿ ನೂತನ ಪಿರಮಿಡ್ ನಿರ್ಮಾಣಕ್ಕಾಗಿ ಮಹಾನಗರ ಪಾಲಿಕಾ ಸದಸ್ಯ ಕೆ ಎಂ ವೀರೇಶ್ ರವರಿಗೆ ಮನವಿ ಸಲ್ಲಿಸಲಾಯಿತು. ಕರಿಬಸಪ್ಪ ವಂದನೆ ಸಲ್ಲಿಸಿದರು.