ದೇಹ ಧಾತುವನ್ನು ಮೀರಿ ಭಕ್ತಿ ಧಾತುವಿನಲ್ಲಿದ್ದವರು ಶಿವಶರಣೆಯರು – ಡಾ. ಸುಮ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.13: ಪುರಾತನ ಕಾಲದಿಂದಲೂ ಹೆಣ್ಣನ್ನು ಭೋಗವಸ್ತು ಎಂದು ಕಂಡ ಸಮಾಜದಲ್ಲಿ, ಹೆಣ್ಣು ಭೋಗವೊಂದೇ ಅಲ್ಲ, ಭಾಗ್ಯದ ನಿಧಿಯೆಂದು ಸಾಧಿಸಿ ತೋರಿಸಿದವರು ಶಿವಶರಣೆಯರು. 12ನೇ ಶತಮಾನದಲ್ಲಿ ಶರಣೆಯರು ಗಂಡನಿಗೆ ಸಹಧರ್ಮಿಣಿಯರಾಗಿ, ಕಾಯಕದಲ್ಲಿ ಬಲಗೈಯಾಗಿ, ಮಾರ್ಗದರ್ಶಿಯಾಗಿ ತಮ್ಮ ಸಂವೇದನೆಗಳನ್ನು ಉದಾತ್ತೀಕಿಸಿ ಕೊಂಡಿದ್ದರೆಂದು ಬಳ್ಳಾರಿಯ ಶ್ರೀ ಮೇಧಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸುಮಾರವರು ಹೇಳಿದರು.
ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮೃತ್ಯುಂಜಯ ಕುಟೀರದಲ್ಲಿ ಏರ್ಪಡಿಸಿದ್ದ 276ನೇ ಮಹಾಮನೆ ಲಿಂ|| ಡಾ. ವೈ.ನಾಗೇಶ ಶಾಸ್ತ್ರಿಗಳ ದತ್ತಿ ಮತ್ತು ಕೋಳೂರು ಮೂಲೆಮಠದ ರುದ್ರಯ್ಯ ಪಾರ್ವತಮ್ಮ ದತ್ತಿ ಕಾರ್ಯಕ್ರಮದಲ್ಲಿ ಶಿವಶರಣೆ ಯರ ಸ್ತ್ರೀ ಸಂವೇದನೆಗಳು, ವಿಷಯ ಕುರಿತು ಮಾತನಾಡುತ್ತಾ ಸ್ತ್ರೀ ತನ್ನ ಸಂವೇದನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಮೂಲಕ ಪುರುಷನೊಂದಿಗೆ ಪೈಪೆÇೀಟಿಗೆ ಇಳಿಯದೇ ಸಹಜ ಸ್ವಾತಂತ್ರ್ಯವನ್ನು ಅನುಭವಿಸಬೇಕು. ಕೀಳರಿಮೆಯಿಂದ ಹೊರಬರಬೇಕು ಎಂದು ಕರೆಕೊಟ್ಟರು.
ಜೋಳದರಾಶಿಯ ನಿವೃತ್ತ ಮುಖ್ಯಗುರುಗಳಾದ ಪಂಪನಗೌಡ ರು ಅತಿಥಿ ನುಡಿಗಳನ್ನಾಡುತ್ತ, ಹನ್ನೆರಡನೇ ಶತಮಾನದ ಶಿವಶರಣೆಯರು ಪುರುಷರಿಗಿಂತಲೂ ವಿಚಾರವಂತರಾಗಿದ್ದು, ಕಲ್ಯಾಣ ರಾಜ್ಯನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೆಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ!! ಹೆಚ್.ಮಲ್ಲಿಕಾರ್ಜುನಗೌಡರು ವಹಿಸಿದ್ದರು. ಉಪನ್ಯಾಸಕ ಎಸ್.ಪಿ.ಹೊಂಬಳರು ವಚನ ಪ್ರಾರ್ಥನೆ ಮಾಡಿದರು. ಜಂಬುನಾಥ ಸ್ವಾಗತ ಕೋರಿದರು. ಪರಿಷತ್ತಿನ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ ದತ್ತಿ ಪರಿಚಯ ಮಾಡಿ ಕಾರ್ಯಕ್ರಮ ನಿರೂಪಿಸಿದರು. ಡಾ. ದಸ್ತಗೀರಸಾಬ್ ದಿನ್ನಿ, ಅರಸೂರು ವಿಶ್ವನಾಥ್, ನಾಗರತ್ನಮ್ಮ, ವನಜಾಕ್ಷಿ, ಡಿ. ಪಾರ್ವತಮ್ಮ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.