ದೇಸಿ ಭತ್ತದ ತಳಿಗಳ ಕ್ಷೇತ್ರೋತ್ಸವ

??

ಗಂಗಾವತಿ, ನ.9: ದೇಸಿ ಭತ್ತದ ತಳಿಗಳು ರೋಗ ನಿರೋಧಕ ಹೆಚ್ಚಿಸುವ ಗುಣ ಹೊಂದಿವೆ ಎಂದು ಕೊಪ್ಪಳ ಜಿಲ್ಲಾ ಕೃಷಿ ನಿರ್ದೇಶಕ ಡಾ.ಶಿವಕುಮಾರ್ ಹೇಳಿದರು.
ತಾಲೂಕಿನ ಹೊಸಹಳ್ಳಿ ಗ್ರಾಮದ ಪಂಪನಗೌಡರ ಗದ್ದೆಯಲ್ಲಿ ಕರ್ನಾಟಕ ನೀರಾವರಿ ನಿಗಮ, ವಿಜಯನಗರ ಕಾಲುವೆಗಳ ಆಧುನೀಕರಣ ಯೋಜನೆ, ಸ್ಮೆಕ್ ಯೋಜನಾ ಸಹಾಯ ಸಂಸ್ಥೆ ಮತ್ತು ಕೃಷಿ ಇಲಾಖೆಯ ಆತ್ಮಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದೇಸಿ ಭತ್ತದ ತಳಿಗಳ ಕ್ಷೇತ್ರೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗಂಗಾವತಿ ಭಾಗದಲ್ಲಿ ಹಿಂದೆ ಬೆಳೆಯಲ್ಪಡುತ್ತಿದ್ದ ಅನೇಕ ಪಾರಂಪರಿಕ ತಳಿಗಳು ಕಣ್ಮರೆಯಾಗಿದ್ದು, ಈಗ ಅವುಗಳನ್ನು ಮತ್ತೆ ರೈತರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.
ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ತಳಿ ವಿಜ್ಞಾನಿ ಡಾ.ಮಹಾಂತ ಶಿವಯೋಗಯ್ಯ ಮಾತನಾಡಿ, ಗಂಗಾವತಿ ಭಾಗದಲ್ಲಿ ವಿಪರೀತ ರಾಸಾಯನಿಕಗಳ ಬಳಕೆಯಿಂದ ಇಲ್ಲಿನ ಸೋನಾ ಇತ್ಯಾದಿ ತಳಿಗಳ ಅಕ್ಕಿಯ ಗುಣಮಟ್ಟ ಕಳಪೆಯಾಗಿದ್ದು, ವಿದೇಶಗಳಲ್ಲಿ ಬೇಡಿಕೆ ಕುಸಿಯುತ್ತಿದೆ. ಇದರಿಂದ ಹೊರಬರಲು ಸಾವಯವ ವಿಧಾನದ ಅಳವಡಿಕೆಯೊಂದೇ ಮಾರ್ಗ. ದೇಸಿ ಭತ್ತದ ತಳಿಗಳು ರೋಗ ಮತ್ತು ಕೀಟ ನಿರೋಧಕತೆ ಹೊಂದಿದ್ದು, ಸಾವಯವ ವಿಧಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತವೆ. ಹಾಗಾಗಿ ಹೊಸಳ್ಳಿಯ ರೈತರ ದೇಸಿ ತಳಿ ಸಂರಕ್ಷಣೆ ಕಾರ್ಯ ಅಭಿನಂದನೀಯ, ತಾಲ್ಲೂಕಿನ ಎಲ್ಲಾ ರೈತರು ಈ ನಿಟ್ಟಿನಲ್ಲಿ ಆಲೋಚಿಸುವುದು ಒಳಿತು ಎಂದರು.
ಸ್ಮೆಕ್ ಯೋಜನಾ ಸಹಾಯ ಸಂಸ್ಥೆಯ ಡಾ.ಶ್ರೀನಿವಾಸ ಮುದ್ರಕರ್ತ ಅಧ್ಯಕ್ಷತೆ ವಹಿಸಿದ್ದರು. ದೇಸಿ ತಳಿಗಳನ್ನು ಬೆಳೆದ 15 ರೈತ ದಂಪತಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು.
ವಡ್ಡರಹಟ್ಟಿ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತ ರಾಜೇಶ್ ವಸ್ತ್ರದ್, ತಾ.ಪಂ. ಇಒ ಡಾ.ಮೋಹನ್‍ಕುಮಾರ್, ಸ್ಮೆಕ್ ಸಂಸ್ಥೆಯ ಜಿ.ಕೃಷ್ಣಪ್ರಸಾದ್, ನಿಂಗಯ್ಯ ಇದ್ದರು. ತಾಲೂಕು ಸಹಾಯಕ ಕೃಷಿ ಅಧಿಕಾರಿ ತಿಪ್ಪೇಸ್ವಾಮಿ ಸ್ವಾಗತಿಸಿದರು. ವೀರೇಶ್ ವಂದಿಸಿದರು. ವೆಂಕಟೇಶ್ ನಿರೂಪಿಸಿದರು.