ದೇಸಾಯಿ ಬದುಕಿನಷ್ಟೇ ಓದನ್ನು ಪ್ರೀತಿಸಿದವರು: ಗುರಿಕಾರ

ಧಾರವಾಡ, ಜ3- ಸಿದ್ಧಲಿಂಗ ದೇಸಾಯಿಯವರು ತಮ್ಮ ಬದುಕಿನಷ್ಟೇ ಓದನ್ನು ಗಾಢವಾಗಿ ಪ್ರೀತಿಸಿದ ಸ್ನೇಹ ಜೀವಿ ಹಾಗೂ ಉತ್ಕøಷ್ಟ ಕವಿ, ಸಾಹಿತಿ, ಪತ್ರಕರ್ತರಾಗಿ ಬಹುಮುಖ ಪ್ರತಿಭೆಯ ಧೀಮಂತ ವ್ಯಕ್ತಿ ಎಂದು ಪ್ರಗತಿಪರ ಚಿಂತಕರಾದ ನಾಗರಾಜ ಗುರಿಕಾರ ಅಭಿಪ್ರಾಯಪಟ್ಟರು.
ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಶ್ರೀ ಸಿದ್ಧಲಿಂಗ ದೇಸಾಯಿ ದತ್ತಿ ಅಂಗವಾಗಿ ಆಯೋಜಿಸಿದ್ದ ಶ್ರೀ ಸಿದ್ಧಲಿಂಗ ದೇಸಾಯಿಯವರ ಬದಕು-ಬರಹ' ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಭಿಮಾನಿಯಾಗಿದ್ದ ಸಿದ್ಧಲಿಂಗ ದೇಸಾಯಿಯವರೊಬ್ಬ ಸಜ್ಜನ ವ್ಯಕ್ತಿಗಳಾಗಿದ್ದರು. ಸದಾ ಅಧ್ಯಯನಶೀಲರಾದ ಅವರ ವ್ಯಕ್ತಿತ್ವ ಅಂದು-ಇಂದು ಎಂದೆಂದಿಗೂ ನಮಗೆಲ್ಲ ಪ್ರೇರಕ ಶಕ್ತಿ. ನಾಟಕ ರಚನಾಕಾರರಾದ ಅವರೇ ಬರೆದಸಿಕ್ಕೇದುಂಗುರ’ ನಾಟಕ ಹಾಗೂ ಉಂಡ ನೀರ ಉಗುಳುದರಾಗ' ಗೀತೆ ಜನಪ್ರಿಯತೆಯನ್ನು ಪಡೆದು ಇಂದಿಗೂ ಜನಮಾನಸದಲ್ಲಿ ಶಾಶ್ವತವಾಗಿವೆ. ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವಂತರಾಗಿದ್ದರು. ಬಡವರ ಪರವಾದ ಇವರೊಬ್ಬ ಅಪ್ಪಟ ಸಮಾಜವಾದಿ ಚಿಂತಕರಾಗಿದ್ದರು. ಅವರ ಜೀವಮಾನದ ಸಾಧನೆಗಳು ಪುಸ್ತಕರೂಪದಲ್ಲಿ ಪ್ರಕಟವಾಗಬೇಕೆಂದರು. ಹಿರಿಯ ಲೆಕ್ಕಪರಿಶೋಧಕರಾದ ಪಂಚನಗೌಡ ಮುದಿಗೌಡರ,ಸಿದ್ಧಲಿಂಗ ದೇಸಾಯಿಯವರ ಬದುಕು-ಬರಹ’ ಕುರಿತು ಉಪನ್ಯಾಸ ನೀಡಿ, ಸಿದ್ಧಲಿಂಗ ದೇಸಾಯಿಯವರ ಬದುಕು ಹಾಗೂ ಬರಹದ ನಡುವೆ ಯಾವುದೇ ವ್ಯತ್ಯಾಸವಿರಲಿಲ್ಲ. ಅವರು ಬರೆದಂತೆ ಬದುಕಿದ ಧೀಮಂತರು. ಅವರದು ಹಸನಾದ ಬದುಕು. ಕವಿ, ಸಾಹಿತಿ, ನಾಟಕಕಾರ, ಭಾಷಾಂತರಕಾರರಾದ ಇವರ ಕೃತಿಗಳು ಜನಮನ್ನಣೆ ಪಡೆದಿವೆ. ಅವರ ಕಳಚಿದ ಕೊಂಡಿ ಕೃತಿ ಅಪೂರ್ಣವಾಗಿದ್ದು, ಕ.ವಿ.ವ.ಸಂಘ ಅದನ್ನು ಪೂರ್ಣಗೊಳಿಸಬೇಕು, ಬೇಂದ್ರೆ ನಂತರ ಆಡುಭಾಷೆಯಲ್ಲಿ ಸಾಹಿತ್ಯ ರಚಿಸಿದ ದೇಸಾಯಿಯವರ ಕೃತಿಗಳಲ್ಲಿ ಸಹಜತೆಯಿಂದ ಕೂಡಿದ ಹಾಸ್ಯವಿದೆ. ಡಾ. ಪಾಪು ಹಾಗೂ ಕೀರ್ತಿನಾಥ ಕುರ್ತಕೋಟಿಯವರೂ ಸಹ ಇವರ ಕೃತಿಗಳನ್ನು ಪ್ರಶಂಸಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಯಾಪೂರ ಮಹಾಂತ ಕಾಲೇಜಿನ ಪ್ರಾಚಾರ್ಯರಾದ ಅಕ್ಕಮಹಾದೇವಿ ಶಿರಿಯಣ್ಣವರ ಮಾತನಾಡಿ, ಸಾಧಕರ ಸ್ಮರಣೆ ಅಲ್ಪಕಾಲಿಕವಾಗಿರದೆ ಸರ್ವಕಾಲಿಕವಾಗಿ ನಡೆಯಬೇಕು, ಇಂತಹ ದತ್ತಿಗಳಿಂದ ಸಾಧಕರನ್ನು ಸ್ಮರಿಸಲು ಸಾಧ್ಯ. ದೇಸಾಯಿಯವರ ಪ್ರತಿಭೆ ಮುಂದಿನ ಜನಾಂಗಕ್ಕೆ ಸ್ಪೂರ್ತಿಯಾಗುವಂತಿದೆ ಎಂದರು.
ಕಾರ್ಯಕ್ರಮದಲ್ಲಿ ದಿ. ಶ್ರೀ ಸಿದ್ಧಲಿಂಗ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ ಗೌರವ ಸಲ್ಲಿಸಲಾಯಿತು. ವೇದಿಕೆ ಮೇಲೆ ದತ್ತಿದಾನಿ ದಶರಥರಾವ್ ದೇಸಾಯಿ ಉಪಸ್ಥಿತರಿದ್ದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿಗಳಾದ ಪ್ರಕಾಶ ಎಸ್. ಉಡಿಕೇರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಿವೃತ್ತ ಮುಖ್ಯೋಪಾಧ್ಯಾಯ ವೀರಣ್ಣ ಒಡ್ಡೀನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಜನೆವರಿ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಯೋಜಕರಾದ ಸತೀಶ ತುರಮರಿ ವಂದಿಸಿದರು. ಪ್ರಾರಂಭದಲ್ಲಿ ವಸಂತಲಕ್ಷ್ಮೀ ಹೊನ್ನಿಗನೂರ ಪ್ರಾರ್ಥಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ನಿಂಗಣ್ಣ ಕುಂಟಿ (ಇಟಗಿ), ಸಹಕಾರ್ಯದರ್ಶಿ ಸದಾನಂದ ಎಸ್. ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಶಾಂತೇಶ ಬ. ಗಾಮನಗಟ್ಟಿ ಹಾಗೂ ನಿಂಗಪ್ಪ ಮಾಯಕೊಂಡ, ಮಹಾಂತೇಶ ನರೇಗಲ್ಲ, ಸಿ. ಜಿ. ಹಿರೇಮಠ, ಪ್ರದೀಪ ಎಂ. ಬಿ. ಫಕ್ಕೀರಪ್ಪ ಮುರಕಟ್ಟಿ ಹಾಗೂ ದೇಸಾಯಿ ಪರಿವಾರದವರು, ಅಭಿಮಾನಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.