ದೇಶ ಸೇವೆ ಮುಗಿಸಿ ಸ್ವಗ್ರಾಮಕ್ಕೆ ಯೋಧರು ವಾಪಸ್

ಗೌರಿಬಿದನೂರು, ಏ. ೯- ತಾಲ್ಲೂಕಿನ ಹುದುಗೂರು ಗ್ರಾಮದ ನಿವಾಸಿ ಜಿ.ನರಸಿಂಹಮೂರ್ತಿ ೨೨ ವರ್ಷಗಳ ಕಾಲ ದೇಶದ ಗಡಿಭಾಗದ ಭದ್ರತಾ ಸೇವೆಯನ್ನು ಮುಗಿಸಿ ತಮ್ಮ ಸ್ವಗ್ರಾಮಕ್ಕೆ ಮರಳಿದರು.
ನಗರದಲ್ಲಿ ಚಾಲಕರ ಯೂನಿಯನ್ ಟ್ರೇಡ್ ಸಂಘದ ಪದಾಧಿಕಾರಿಗಳು ಇವರನ್ನು ಭೇಟಿ ಮಾಡಿ ಸಂತಸದಿಂದ ಕೇಕ್ ಕತ್ತರಿಸಿ ಅಭಿನಂಧಿಸಿದರು.
ಬಳಿಕ ಮಾತನಾಡಿದ ಮಾಜಿ ಯೋಧ ಜಿ.ನರಸಿಂಹಮೂರ್ತಿ, ೧೯೯೮ ರಲ್ಲಿ ಗಡಿಭದ್ರತಾ ಸೇವೆಗೆ ಆಯ್ಕೆಯಾಗಿ ದೇಶದ ಜೋದ್ ಪುರ್, ಜಮ್ಮು ಕಾಶ್ಮೀರ, ರಾಜಸ್ಥಾನ, ಪಶ್ಚಿಮ ಬಂಗಾಳ, ತ್ರಿಪುರ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸತತ ೨೨ ವರ್ಷಗಳ ಕಾಲ ಸೇವೆ ಮಾಡಿದ್ದೇವೆ. ಇದರಿಂದ ದೇಶಸೇವೆ ಮಾಡಿದ ತೃಪ್ತಿ ನನಗಿದೆ. ಈ ಸಂದರ್ಭದಲ್ಲಿ ಮರಳಿ ತಾಯ್ನಾಡಿಗೆ ಬಂದು ಜನ್ಮ ನೀಡಿದ ತಾಯಿ ಹಾಗೂ ಹೆಂಡತಿ ಮಕ್ಕಳೊಂದಿಗೆ ಬೆರೆತು ಬಾಳುವ ಜತೆಗೆ ಸಮಾಜಕ್ಕೆ ಕೈಲಾದಷ್ಟು ಮಟ್ಟಿಗೆ ಸೇವೆ ಮಾಡುವ ಹಂಬಲವಿದೆ. ಈ ನಿಟ್ಟಿನಲ್ಲಿ ಯಾವುದೇ ರಾಜಕೀಯ ಅಂಟು ಪಡೆಯದೆ ನೆಮ್ಮದಿಯಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುತ್ತೇನೆ. ಪ್ರತಿಯೊಬ್ಬರೂ ಸಾಧ್ಯವಾದಷ್ಟು ಮಟ್ಟಿಗೆ ಸೇನೆ ಸೇರಿ ದೇಶಸೇವೆ ಮಾಡುವ ಅವಕಾಶ ಪಡೆಯಬೇಕಾಗಿದೆ ಎಂದು ಹೇಳಿದರು.
ಚಾಲಕರ ಯೂನಿಯನ್ ಟ್ರೇಡ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಛತ್ರಂ ಶ್ರೀಧರ್ ಮಾತನಾಡಿ, ಗ್ರಾಮೀಣ ಭಾಗದಿಂದ ತೆರಳಿ ದೇಶದ ಗಡಿಯಲ್ಲಿ ೨೦ ವರ್ಷಗಳ ಕಾಲ ಸೇವೆ ಮಾಡಿ ಹುಟ್ಟೂರಿಗೆ ಆಗಮಿಸಿರುವ ನರಸಿಂಹಮೂರ್ತಿ ಯವರು ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದ್ದಾರೆ. ದೇಶ ಸೇವೆಯು ನಿಜಕ್ಕೂ ಜನ್ಮ ನೀಡಿದ ತಾಯಿಯ ಋಣ ತೀರಿಸುವಷ್ಟು ಪುಣ್ಯದ ಕಾರ್ಯವಾಗಿದೆ. ಪ್ರತಿಯೊಬ್ಬರೂ ಇಂತಹ ವೀರ ಯೋಧರ ಗಡಿ ಸೇವೆಯನ್ನು ಅರಿತು ಅವರಂತೆ ಬದುಕುವ ಪ್ರಯತ್ನ ಮಾಡಬೇಕಾಗಿದೆ ಎಂದು ಹೇಳಿದರು.
ಇದೇ ವೇಳೆ ಮುಖಂಡರಾದ ಸುನಿಲ್, ಕುಮಾರ್, ರಂಜಿತ್, ಗಿರೀಶ್, ಪುರುಷೋತ್ತಮ್, ಜಗದೀಶ್ ಇತರರು ಉಪಸ್ಥಿತರಿದ್ದರು.