
ಹೊಸಕೋಟೆ,ಆ.೧೭-ಪರಕೀಯರ ಆಳ್ವಿಕೆಯಿಂದ ದೇಶ ಮುಕ್ತಿ ಹೊಂದಿ ಸ್ವಾತಂತ್ರ್ಯ ಗಳಿಸಿದರೂ ಅಸಮಾನತೆ ಶೋಷಣೆಗಳಿಂದ ದೇಶ ನಲುಗುತ್ತಿದ್ದು ದೇಶ ರಕ್ಷಣೆ ಮಾಡಲು ಯುವ ಸಮಯದಾಯದ ಹೃದಯ ಮಿಡಿತ ಅತ್ಯಗತ್ಯ ಎಂದು ರಾಜ್ಯ ರೆಡ್ಡಿ ಸಂಘದ ನಿದೇಶಕ ಎಂ.ಎ.ಕೃಷ್ಣಾರೆಡ್ಡಿ(ಕಿಟ್ಟಿ)ತಿಳಿಸಿದರು.
ತಾಲೂಕಿನ ಅನುಗೊಂಡನಹಳ್ಳಿ ಹೋಬಳಿಯ ಮುತ್ಸಂದ್ರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ದ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ದೇಶವು ಪರಕೀಯರ ಅಧೀನದಲ್ಲಿ ಸಿಲುಕಿ ಬಾರತೀಯರೆಲ್ಲಾ ಗುಲಾಮರಾಗಿದ್ದ ಸಂಧರ್ಭದಲ್ಲಿ ಮಹಾತ್ಮಾ ಗಾಂದೀಜಿಯಂತಹ ಅಪ್ರತಿಮ ಹೋರಾಟಗಾರರ ಅವಿರತ ಹೋರಾಟದ ಫಲವಾಗಿ ದೇಶ ಪರಕೀಯರ ದಾಸ್ಯದಿಂದ ದೂರವಾಗಿ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಯಿತು. ಭಾರತದ ಸ್ವಾತಂತ್ರ್ಯ ಗಾಥೆ ಅತ್ಯದ್ಭುತವಾಗಿದ್ದು ಅಹಿಂಸಾ ಮಾರ್ಗದಲ್ಲಿ ಹೋರಾಡಿ ಸ್ವಾತಂತ್ರ್ಯ ಗಳಿಸಿದ ಏಕೈಕ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಗೂ ಅಹಿಂಸಾ ಮಾರ್ಗ ಭಾರತೀಯರ ಭಾವೈಕ್ಯತೆಗೆ ಸ್ಪೂರ್ತಿಯಾಗಿದ್ದು ಪ್ರಪಂಚದ ಮುಂದಿನ ಪ್ರಗತಿಗೆ ದಾರಿದೀಪವಾಗಿದೆ ಎಂದರು.
ಮುಖಂಡರಾದ ಶಿವಪ್ರಸಾದ್, ಧನುಷ್ ರೆಡ್ಡಿ, ದರ್ಶನ್ ರೆಡ್ಡಿ, ಪುನೀತ್, ಶಾಂತಕುಮಾರ್ ಸೇರಿದಂತೆ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಜರಿದ್ದರು.