ದೇಶ ಬಿಕ್ಕಟ್ಟಿನಲ್ಲಿರುವಾಗ ಸುಮ್ಮನೆ ಕೂರಲು ಆಗಲ್ಲ:ಸುಪ್ರೀಂ

ನವದೆಹಲಿ,ಏ 27- ರಾಷ್ಟ್ರೀಯ ಬಿಕ್ಕಟ್ಟಿನ ವಿಚಾರದಲ್ಲಿ ಮೂಕ ಪ್ರೇಕ್ಚಕರಂತೆ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂಕೋರ್ಟ್, ಕೆಲವು ಪ್ರಕರಣಗಳಲ್ಲಿ ಮಧ್ಯ ಪ್ರವೇಶಿಸುವ ಅಗತ್ಯತೆ ಇದೆ ಎಂಬುದಾಗಿ ಪ್ರತಿಪಾದಿಸಿದೆ.
ಕೋವಿಡ್ ಸಾಂಕ್ರಾಮಿಕ ರೋಗ ಕುರಿತಂತೆ ವಿವಿಧ ಕೋರ್ಟ್ ಗಳಲ್ಲಿ ದಾಖಲಾಗಿರು‌ವ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಗಳ ಡಿ.ವೈ ಚಂದ್ರಚೂಡ್, ಎಲ್.ಎನ್.ರಾವ್ ಮತ್ತು ರವೀಂದ್ರ ಎಸ್.ಭಟ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠದ ಮುಂದೆ ನಡೆಯಿತು.
ಸುಪ್ರೀಂ ಕೋರ್ಟ್ ವ್ಯವಹರಿಸಬೇಕಾದ ಕೆಲವು ರಾಷ್ಟ್ರೀಯ ಸಮಸ್ಯೆಗಳಿವೆ. ಆದರೆ ರಾಷ್ಟ್ರೀಯ ಬಿಕ್ಕಟ್ಟಿನ ಸಮಯದಲ್ಲಿ ಸುಪ್ರೀಂ ಕೋರ್ಟ್ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ‌‌ ಎಂದು ಹೇಳಿದೆ.
ಹಾಗೆಯೇ ಹೈಕೋರ್ಟ್‌ಗಳು ವಿವಿಧ ರಾಜ್ಯಗಳಲ್ಲಿನ ಅರ್ಜಿಗಳನ್ನು ಆಲಿಸುವ ತಡೆಯುವ ಉದ್ದೇಶವನ್ನು ಹೊಂದಿಲ್ಲ ಎಂದು ನ್ಯಾಯಫೀಠ ಸ್ಪಷ್ಟವಾಗಿ ಹೇಳಿದೆ.
ಆಮ್ಲಜನಕ, ಔಷಧಿಗಳು, ಲಸಿಕೆಗಳು ಮತ್ತು ಇತರ ಸರಬರಾಜುಗಳ ಕುರಿತಂತೆ ದೇಶದ ವಿವಿಧ ಸುಪ್ರೀಂ ಕೋರ್ಟ್ ನಲ್ಲಿ ಸಾಕಷ್ಟು ಅರ್ಜಿಗಳು ದಾಖಲಾಗಿವೆ. ಇಂತಹುದೇ ಅರ್ಜಿಗಳು ವಿವಿಧ ಹೈಕೋರ್ಟ್ ಗಳಲ್ಲೂ ದಾಖಲಾಗುತ್ತಿದ್ದು, ಈ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿತ್ತು. ಅಲ್ಲದೆ ಆಕ್ಸಿಜನ್, ಔಷಧಿಗಳು ಸೇರಿದಂತೆ ಅಗತ್ಯ ಪರಿಕರಗಳ ಸುಗಮ ಸರಬರಾಜು ಸಮಸ್ಯೆ ನೀಗಿಸಲು ರಾಷ್ಟ್ರೀಯ ಯೋಜನೆ ರೂಪಿಸಿ ಎಂದು ಈ ಹಿಂದೆ ಸೂಚಿಸಿತ್ತು.