ಬೀದರ್: ಮಾ.25:ಜಿಲ್ಲೆಯಲ್ಲಿ ಆರ್ಥಿಕ ಬೆಳವಣಿಗೆಗೆ ಪೂರಕ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ಅರ್ಥೋತ್ಥಾನ ಪರಿಷತ್ ಅಸ್ತಿತ್ವಕ್ಕೆ ಬಂದಿದೆ.
ನಗರದ ವಿದ್ಯಾನಗರ ಕಾಲೊನಿಯಲ್ಲಿ ಆಯೋಜಿಸಿದ್ದ ಬಲಿದಾನ ದಿನಾಚರಣೆ ಕಾರ್ಯಕ್ರಮದಲ್ಲಿ ತಮಲೂರಿನ ಶಿವಾನಂದ ಶಿವಾಚಾರ್ಯರು ಪರಿಷತ್‍ನ್ನು ಉದ್ಘಾಟಿಸಿದರು.
ಅರ್ಥೋತ್ಥಾನ ಪರಿಷತ್‍ನಿಂದ ಜಿಲ್ಲೆಯಲ್ಲಿ ವಾಣಿಜ್ಯೋದ್ಯಮ ಸೃಷ್ಟಿಸುವ ಕೆಲಸ ಆಗಲಿ ಎಂದು ಅವರು ಶುಭ ಹಾರೈಸಿದರು.
ಭಗತ್‍ಸಿಂಗ್, ಸುಖದೇವ್, ರಾಜಗುರು ಅವರ ದೇಶ ಪ್ರೇಮ ಹಾಗೂ ದೇಶಾಭಿಮಾನವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಮುಖಂಡ ಚನ್ನಬಸವಂತ ರೆಡ್ಡಿ ಮಾತನಾಡಿ, ದೇಶಕ್ಕಾಗಿ ತ್ಯಾಗ ಹಾಗೂ ಬಲಿದಾನ ಮಾಡಿದವರನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಗೌರವಿಸಬೇಕು ಎಂದರು.
ಅರ್ಥೋತ್ಥಾನ ಪರಿಷತ್ ಅಧ್ಯಕ್ಷ ಸಚ್ಚಿದಾನಂದ ಚಿದ್ರೆ ಮಾತನಾಡಿ, ಪರಿಷತ್ ಜಿಲ್ಲೆಯ ಆರ್ಥಿಕ ಅಭಿವೃದ್ಧಿಗೆ ಶ್ರಮಿಸಲಿದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಉದ್ಯಮಿ ಪ್ರವೀಣಕುಮಾರ ಕೇಸ್ಕರ್ ಅವರು, ವಾಣಿಜ್ಯೋದ್ಯಮ ಸ್ಥಾಪನೆ ಕುರಿತು ಮಾಹಿತಿ ನೀಡಿದರು.
ಡಾ. ಲೋಕೇಶ ಹಿರೇಮಠ, ಭಗವಂತಪ್ಪ ಅಪ್ಪಣ್ಣ, ಸತೀಶಕುಮಾರ ಸ್ವಾಮಿ, ಸೌರಭ ಎಳನೂರಕರ್, ರಾಜಕುಮಾರ ಅಳ್ಳೆ, ಕವಿರಾಜ ಹಲ್ಮಡಗಿ ಮತ್ತಿತರರು ಇದ್ದರು.
ಅರ್ಥೋತ್ಥಾನ ಪರಿಷತ್ ಕಾರ್ಯದರ್ಶಿ ಸತ್ಯಪ್ರಕಾಶ ಸ್ವಾಗತಿಸಿದರು. ಪ್ರಗ್ಯ ನಾಗವಾರ ನಿರೂಪಿಸಿದರು. ಉಪಾಧ್ಯಕ್ಷ ಶ್ರೀಕಾಂತ ಮೋದಿ ವಂದಿಸಿದರು.