ದೇಶ ನಿರ್ಮಾಣದಲ್ಲಿ ಅಂಬೇಡ್ಕರ್ ಕೊಡುಗೆ ಚರಿತ್ರಾರ್ಹ

ಬೆಂಗಳೂರು, ಏ. ೧೪- ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಧನೆ, ದೇಶ ನಿರ್ಮಾಣದಲ್ಲಿ ಅವರ ಕೊಡುಗೆ ಚರಿತ್ರಾರ್ಹವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಸಮಾಜದಲ್ಲಿ ಸ್ವಾತಂತ್ರ್ಯ, ಭ್ರಾತೃತ್ವ, ಸಮಾನತೆಗಳನ್ನು ಪ್ರತಿಪಾದಿಸಿ ಶೋಷಿತ ಸಮುದಾಯಗಳ ಪರವಾಗಿ ನಿರಂತರವಾಗಿ ಹೋರಾಡಿದವರು ಬಾಬಾ ಸಾಹೇಬ್ ಎಂದರು.
ನವಭಾರತ ನಿರ್ಮಾಣದಲ್ಲಿ ಅವರ ಕೊಡುಗೆ ದೊಡ್ಡದು. ಸಮಾನತೆಯ ಸಮಾಜಕ್ಕಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟದಂತಹ ಮೂರು ಮಂತ್ರಗಳನ್ನು ಅವರು ಶೋಷಿತ ವರ್ಗಕ್ಕೆ ನೀಡಿದ್ದಾರೆ ಎಂದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಡೀ ಬದುಕನ್ನು ದೀನ ದಲಿತರ ರಕ್ಷಣೆಗಾಗಿ ಮುಡುಪಾಗಿಟ್ಟಿದ್ದರು. ಸಾಮಾಜಿಕ ಸಮಾನತೆಗಾಗಿ ಹೋರಾಟ ರೂಪಿಸಿ ದಮನಿತರ ಆಶಾಕಿರಣವಾಗಿದ್ದರು. ಯಾವುದೇ ಸಮುದಾಯ ಅಭಿವೃದ್ಧಿಯಾಗಲು ಶಿಕ್ಷಣವೊಂದೇ ಮುಖ್ಯ ಅಸ್ತ್ರ ಎಂದು ಪ್ರತಿಪಾದಿಸಿದವರು ಎಂದರು.
ಆಧುನಿಕ ಭಾರತವನ್ನು ಜಾತಿ ಮತ್ತು ಮೇಲು ಕೀಳುಗಳಂತಹ ವ್ಯವಸ್ಥೆಯಿಂದ ಮುಕ್ತ ಮಾಡಿ ದೇಶ ನಿರ್ಮಾಣ ಮಾಡುವ ಮಹಿಳಾ ಸಮಾನತೆಯನ್ನು ಎತ್ತಿ ಹಿಡಿಯುವ ಸಮಾನತೆಯ ಕನಸನ್ನು ಬಾಬಾ ಸಾಹೇಬ್ ಕಂಡಿದ್ದರು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಮುಖ್ಯ ಕಾರ್ಯದರ್ಶಿ ರವಿಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.