ದೇಶ ಕಾಯುವ ಸೈನಿಕ ಅನ್ನ ಕೊಡುವ ರೈತನನ್ನು ಮರೆಯಬಾರದು:  ರಂಭಾಪುರಿ ಶ್ರೀ

ಸಂಜೆವಾಣಿ ವಾರ್ತೆ

ಬಾಳೆಹೊನ್ನೂರು. ಮಾ.೨೨;  ಶ್ರಮದ ಬೆವರಿನ ಫಲ ಶಾಶ್ವತ ಮತ್ತು ಸುಖದಾಯಕ. ಶ್ರಮವಿಲ್ಲದೇ ಬಂದ ಸಂಪತ್ತು ಬಹಳ ಕಾಲ ಉಳಿಯದು. ದೇಶವನ್ನು ಕಾಯುವ ಸೈನಿಕ ಮತ್ತು ಅನ್ನ ಕೊಡುವ ರೈತನನ್ನು ಎಂದಿಗೂ ಮರೆಯಬಾರದೆಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಅವರು ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗಿದ ಸಾವಯವ ಕೃಷಿ ಒಂದು ಚಿಂತನ ಗೋಷ್ಠಿಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.ಭಾರತ ಹಳ್ಳಿಗಳ ದೇಶ. ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾಗಲು ಸಾಧ್ಯ. ನೂರಕ್ಕೆ ಎಪ್ಪತ್ತರಷ್ಟು ಜನರು ರೈತರಿದ್ದಾರೆ. ಮನುಷ್ಯನ ಉಜ್ವಲ ಭವಿಷ್ಯಕ್ಕೆ ಆಹಾರ ಆರೋಗ್ಯ ಮತ್ತು ಆಧ್ಯಾತ್ಮ ಬಹಳ ಮುಖ್ಯ. ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಭೂಮಿಗಳು ಬರಡಾಗುತ್ತಿವೆ. ರಾಸಾಯನಿಕ ಗೊಬ್ಬರದಿಂದ ಬೆಳೆದ ಪದಾರ್ಥಗಳ ಸೇವನೆಯಿಂದ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಉಂಟಾಗುತ್ತವೆ. ಸತ್ವಭರಿತ ಬೆಳೆಯನ್ನು ಬೆಳೆಯಬೇಕಾದರೆ ಸಾವಯವ ಕೃಷಿಯ ಅವಶ್ಯಕತೆಯಿದೆ. ಸಾವಯವ ಕೃಷಿಯಿಂದ ಬಂದ ಫಸಲುಗಳ ಬೆಳಕೆಯಿಂದ ಮನುಷ್ಯನ ಆರೋಗ್ಯ ಹೆಚ್ಚುವುದರಲ್ಲಿ ಯಾವುದೇ ಸಂದೇಹವಿಲ್ಲ. ಔದ್ಯೋಗಿಕ ಕ್ಷೇತ್ರಕ್ಕೆ ಕೊಡುವ ಸಹಕಾರವನ್ನು ಸಾವಯವ ಕೃಷಿ ಮಾಡುವ ರೈತನಿಗೆ ಸರ್ಕಾರಗಳು ರೈತನಿಗೆ ಕೊಟ್ಟರೆ ಅದ್ಭುತ ಸಾಧನೆಯನ್ನು ಮಾಡಲು ಸಾಧ್ಯ. ಮನುಷ್ಯ ಸ್ವೀಕರಿಸುವ ಆಹಾರ ವಸ್ತುಗಳು ಕಲಬೆರಕೆಯಿಂದ ಕಲುಷಿತಗೊಂಡಿವೆ. ಭೂಮಿ ಫಲವತ್ತಾಗಲು ಸಾವಯವ ಕೃಷಿಯನ್ನು ರೈತರು ಅಳವಡಿಸಿಕೊಂಡು ಉತ್ತಮ ಬೆಳೆ ಬೆಳೆದಾಗ ಯೋಗ್ಯ ಬೆಲೆಯನ್ನು ಸರ್ಕಾರ ದೊರಕಿಸಿಕೊಟ್ಟರೆ ರೈತರ ಬಾಳು ಉಜ್ವಲಗೊಳ್ಳಲು ಸಾಧ್ಯ. ರೈತರ ಹೆಸರಿನಲ್ಲಿ ಅದೆಷ್ಟೋ ಸಂಘಟನೆಗಳಿದ್ದರೂ ನಿಶ್ಚಿತ ಫಲ ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ಶ್ರೀ ರಂಭಾಪುರಿ ಜಗದ್ಗುರುಗಳು ವಿಷಾದ ವ್ಯಕ್ತಪಡಿಸಿದರು.ಸಮಾರಂಭ ಉದ್ಘಾಟಿಸಿದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಹೆಚ್.ಆರ್.ಬಸವರಾಜ್ ಮಾತನಾಡಿ ರೈತರ ಸಂಕಷ್ಟಗಳು ಬಹಳಷ್ಟಿವೆ. ಶ್ರಮದಿಂದ ದುಡಿಯುವ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಸಕಾಲಕ್ಕೆ ಮಳೆಯಿಲ್ಲದೇ ಉತ್ತಮ ಬೆಳೆಯಿಲ್ಲದೇ ಇರುವುದು ಹಾಗೂ ಬೆಳೆದ ಬೆಳೆಗೆ ಹೆಚ್ಚಿನ ಬೆಲೆ ಸಿಗದಂತಾಗಿ ರೈತ ಸಾಲದಲ್ಲಿ ಸಿಲುಕಿ ನಲುಗುತ್ತಿದ್ದಾನೆ. ಇಂಥ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶೇಷ ಗಮನ ಹರಿಸಿ ರೈತರಿಗೆ ಹೆಚ್ಚೆಚ್ಚು ಅನುಕೂಲಗಳನ್ನು ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.