ದೇಶ ಕಟ್ಟುವ ಕಾರ್ಯಕ್ಕೆ ಎನ್.ಎಸ್.ಎಸ್ ಕೊಡುಗೆ ಅನನ್ಯ

ಕಲಬುರಗಿ,ಸೆ.01: ಇಂದಿನ ವಿದ್ಯಾರ್ಥಿಗಳು, ನಾಳಿನ ನಾಗರಿಕರಾಗಿರುವದರಿಂದ, ವಿದ್ಯಾರ್ಥಿ ದೆಸೆಯಿಂದಲೇ, ಶಿಸ್ತು, ರಾಷ್ಟ್ರೀಯ ಪ್ರಜ್ಞೆ, ಮಾನವೀಯ ಹಾಗೂ ನೈತಿಕ ಮೌಲ್ಯಗಳು, ಸಮಯಪ್ರಜ್ಞೆ, ಬದ್ದತೆ, ಜವಾಬ್ದಾರಿ, ಪ್ರಾಮಾಣಿಕತೆ, ನಿಶ್ಚಿತ ಗುರಿ, ನಿರಂತರ ಪ್ರಯತ್ನದಂತಹ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಇಂತಹ ಗುಣಗಳನ್ನು ಬೆಳೆಸಿ ಭವಿಷ್ಯದಲ್ಲಿ ಶ್ರೇಷ್ಠ ನಾಯಕರಾಗಲು, ದೇಶ ಕಟ್ಟುವ ಕಾರ್ಯ ಮಾಡುವಲ್ಲಿ ಎನ್.ಎಸ್.ಎಸ್ ಕೊಡುಗೆ ಅನನ್ಯವಾಗಿದೆ ಎಂದು ಎನ್.ಎಸ್.ಎಸ್ ವಿಭಾಗೀಯ ಸಂಯೋಜಕ ಡಾ.ಚಂದ್ರಶೇಖರ ದೊಡ್ಡಮನಿ ಹೇಳಿದರು.
ಜೇವರ್ಗಿ ಪಟ್ಟಣದ ಬಸವೇಶ್ವರ ವೃತ್ತದ ಬಳಿಯಿರುವ ಶ್ರೀ ಕದಂಬ ಪಿಯು ಕಾಲೇಜಿನಲ್ಲಿ ಶುಕ್ರವಾರ ಜರುಗಿದ ನೂತನ ಎನ್.ಎಸ್.ಎಸ್ ಘಟಕದ ಪ್ರಾರಂಭೋತ್ಸವವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಲಬುರಗಿಯ ಜಿಲಾನಾಬಾದ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಶಾಂತಕುಮಾರ ಪಾಟೀಲ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದಲೆ ಉನ್ನತ ವ್ಯಕ್ತಿತ್ವ ನಿರ್ಮಾಣದ ಬಗೆಯನ್ನು ಅರಿತು, ದೇಶಸೇವೆ ಮಾಡಲಿ ಎಂಬ ಉದ್ದೇಶದಿಂದ ಎನ್.ಎಸ್.ಎಸ್ ಸ್ಥಾಪನೆಯಾಗಿದೆ. ವಿದ್ಯಾರ್ಥಿಗಳು ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆಗ ಆದ್ಯತೆಯನ್ನು ನೀಡಬೇಕು. ಎನ್.ಎಸ್.ಎಸ್ ಧ್ಯೇಯೋದ್ಧೇಶಗಳನ್ನು ತಿಳಿದುಕೊಂಡು ಅದರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಪರಿಸರ ಕಾಪಾಡಲು ಶ್ರಮಿಸಬೇಕು ಮತ್ತು ಜನ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನ ಎನ್.ಎಸ್.ಎಸ್ ಅಧಿಕಾರಿ ಎಚ್.ಬಿ.ಪಾಟೀಲ, ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಮಾಳಗಿ, ಪ್ರಾಚಾರ್ಯ ಶ್ರೀಶೈಲ್ ಖಣದಾಳ, ಉಪನ್ಯಾಸಕ ಅಯ್ಯಣ ನಾಟಿಕಾರ್, ದೇವಣಗೌಡ್ ಪಾಟೀಲ, ಸೋಮಣ್ಣ ಯಾಳವಾರ, ಪರ್ವಿನ್ ಮದ್ರಕಿ, ರೆಹಮುನ್ನಿಸಾ, ರಮೇಶ ಯನಗುಂಟಿ, ಶ್ರೀವಾಬ್ ಜಮಾದಾರ, ವಿಜಯಕುಮಾರ ಯಂಕಂಚಿ, ಮಹಮ್ಮದ್ ಅಲಿ, ಶಕೀಲಾ ಬೇಗಂ, ಪ್ರ.ದ.ಸ ಬಸವರಾಜ ಗೌಡಗೇರಿ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.