ದೇಶ ಕಂಡ ಮಹಾನ್ ನಾಯಕ ಡಾ ಅಂಬೇಡ್ಕರ್: ಪ್ರೊ ಅಷ್ಠಗಿ

ಕಲಬುರಗಿ:ಏ.14: ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು ಭಾರತ ದೇಶ ಕಂಡ ಮಹಾನ್ ನಾಯಕ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಪ್ರೊ|| ಯಶವಂತರಾಯ ಅಷ್ಠಗಿ ಅಭಿಪ್ರಾಯಪಟ್ಟರು.

ಕಲಬುರ್ಗಿ ನಗರದ ಜಗತ ವೃತದಲ್ಲಿರುವ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 132ನೇ ಜಯಂತೋತ್ಸವ ಅಂಗವಾಗಿ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದರೊಂದಿಗೆ ಮಾತನಾಡಿದರು.

ಆಧುನಿಕ ಭಾರತ ನಿರ್ಮಾಣದಲ್ಲಿ ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದೆ.
ವಿಶ್ವದ ಶ್ರೇಷ್ಠ ಜ್ಞಾನಿಯಾಗಿದ್ದ ಅವರು ಒಂದು ಜಾತಿ, ಸಮುದಾಯ ಅಥವಾ ಒಂದು ಧರ್ಮಕ್ಕೆ ಸೀಮಿತರಾಗದೆ, ದೇಶದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಮೂಲಕ ನ್ಯಾಯ ಒದಗಿಸಿದ ಮಹಾನ ದಾರ್ಶನಿಕ ಎಂದು ಬಣ್ಣಿಸಿದರು.

ಶೋಷಿತರು ವಂಚಿತರು ಮತ್ತು ಮಹಿಳೆಯರಿಗೆ ದೇಶದಲ್ಲಿ ಸರಿ ಸಮಾನವಾದ ಹಕ್ಕುಗಳನ್ನು ಕೊಡಿಸಲು ಜೀವನದ ಕೊನೆಯವರೆಗೂ ನಿರಂತರವಾಗಿ ಹೋರಾಡಿದರು. ದೇಶದೆಲ್ಲೆಡೆ ಅವರ ಜಯಂತೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದೂ, ಅವರ ಆಚಾರ – ವಿಚಾರ ಪ್ರತಿಯೊಬ್ಬರಿಗೂ ತಲುಪಿಸುವುದು ಇಂದಿನ ಅಗತ್ಯವಾಗಿದೆ, ಅವರನ್ನು ಒಂದು ಸಮುದಾಯಕ್ಕೆ ಒಂದು ವರ್ಗಕ್ಕೆ ಸೀಮಿತ ಮಾಡುವುದು ಸರಿಯಲ್ಲ ಎಂದು ಪ್ರೊ ಯಶವಂತರಾಯ ಅಷ್ಟಗಿ ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪ್ರೀತಂ ಪಾಟೀಲ್ ಜಂಬಗಿ, ಜಿಲ್ಲಾ ಉಪಾಧ್ಯಕ್ಷ ಶಿವಾ ಅಷ್ಠಗಿ,ಯುವ ಮೋರ್ಚಾ ಮುಖಂಡರಾದ ಗೋಪಾಲಕೃಷ್ಣ ಕುಲಕರ್ಣಿ, ಅಮಿತ್ ಕುಲಕರ್ಣಿ, ಶರಣು ಅಂಕಲಗಿ ಜೀನೇಶ್ ಜ್ಯೋತಿ, ನೀಲಕಂಠ ಝಳಕಿ, ಶರಣಪ್ಪ ಜೈಕರ್, ದೇವೇಂದ್ರ ಹುಲಿಮನಿ, ಶರಣಪ್ಪ ಹುಲಗೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.