ದೇಶ ಒಡೆಯುವ ಕಾರ್ಯದಲ್ಲಿ ಕಾಂಗ್ರೆಸ್ ನಿರತ

ಗುಬ್ಬಿ, ಮಾ.೮- ಅರವತ್ತು ವರ್ಷಕ್ಕೂ ಅಧಿಕ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶ ಒಡೆಯುವ ಕೆಲಸ ಮಾಡಿದೆ. ಆದರೆ ಮೋದಿ ಅವರು ಕೇವಲ ಎಂಟು ವರ್ಷದಲ್ಲಿ ಬಲಿಷ್ಠ ಭಾರತ ನಿರ್ಮಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ .ವೈ.ವಿಜಯೇಂದ್ರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಬಿಜೆಪಿ ಏರ್ಪಡಿಸಿದ್ದ ಹಿಂದುಳಿದ ವರ್ಗಗಳ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ಎಲುಬಿಲ್ಲದ ನಾಲಿಗೆ ಮನಬಂದಂತೆ ಮೋದಿ ಅವರನ್ನು ಟೀಕಿಸುವ ಕಾಂಗ್ರೆಸ್‌ಗೆ ಮುಂಬರುವ ಚುನಾವಣೆಯಲ್ಲಿ ಬಹುಮತದಿಂದ ಸರ್ಕಾರ ರಚಿಸಿ ತೋರಿಸುತ್ತೇವೆ ಎಂದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ ಅವರು ಮನೆಯಲ್ಲಿ ಉಳಿಯುತ್ತಾರೆ ಎಂದು ಆಲೋಚಿಸಿದ್ದ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ತರಲು ಪಣ ತೊಟ್ಟು ಮರಳಿ ರಾಜ್ಯ ಪ್ರವಾಸ ಮಾಡುವ ಬಗ್ಗೆ ಹೇಳಿದ್ದೆ ತಡ ಚಿಂತೆಗೆ ಒಳಗಾಗಿದೆ. ಈಗಾಗಲೇ ಪಕ್ಷದ ಪ್ರಚಾರ ಕಾರ್ಯ ನಮ್ಮ ಕಾರ್ಯಕರ್ತರು ಮಾಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಬಹುತೇಕ ಸ್ಥಾನ ಗಳಿಸಲಿದೆ. ಚುನಾವಣೆಯ ಫಲಿತಾಂಶ ದಿನ ಜಿಲ್ಲೆಯಲ್ಲಿ ಮೊದಲು ಬಿಜೆಪಿ ಗೆಲುವು ಘೋಷಣೆ ಗುಬ್ಬಿ ಕ್ಷೇತ್ರದಿಂದಲೇ ಎಂದು ನೆರೆದಿದ್ದ ಕಾರ್ಯಕರ್ತರನ್ನು ಹುರಿದುಂಬಿಸಿದ ಅವರು, ಮತದಾರರು ಬಿಜೆಪಿಗೆ ಮತ ನೀಡಲು ಗುಬ್ಬಿಯಲ್ಲಿ ಮುಂದಾಗಿದ್ದಾರೆ. ಆದರೆ ಮುಖಂಡರಲ್ಲಿ ಒಗ್ಗಟ್ಟು ಪ್ರದರ್ಶನ ಅಗತ್ಯವಿದೆ. ಅದು ಸಹ ಮುಂದಿನ ದಿನದಲ್ಲಿ ಕಾಣಲಿದೆ. ತಮ್ಮ ಜೇಬಿನಿಂದ ಹಣ ವ್ಯಯ ಮಾಡಿರುವ ಪ್ರಾಮಾಣಿಕ ಕಾರ್ಯಕರ್ತರ ಶ್ರಮಕ್ಕೆ ತಕ್ಕ ಫಲ ಖಂಡಿತಾ ಸಿಗಲಿದೆ. ವಿಧಾನಸಭೆಯ ನಂತರದ ಲೋಕಸಭಾ ಚುನಾವಣೆಯಲ್ಲೂ ಸಹ ಮತ್ತೊಮ್ಮೆ ಬಿಜೆಪಿ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಗುಂಪುಗಾರಿಕೆ ದ್ವೇಷ ಮಾಡುವುದರಿಂದ ದೂರ ಉಳಿದು ಸ್ಥಳೀಯ ಮುಖಂಡರಲ್ಲಿ ಒಗ್ಗಟ್ಟು ಪ್ರದರ್ಶನ ಮೂಡಬೇಕಿದೆ. ಕೇವಲ ಫ್ಲಕ್ಸ್ ಮೂಲಕ ಒಗ್ಗಟ್ಟು ಪ್ರದರ್ಶನಕ್ಕಿಂತ , ಕಚ್ಚಾಟ ಟೀಕೆ ಹಾಗೂ ಒಂದು ಸಮುದಾಯದ ಮೀಟಿಂಗ್ ಬೇಡಿಕೆ ಇವೆಲ್ಲದರಿಂದ ದೂರ ಉಳಿದು ಬಿಜೆಪಿ ಗೆಲುವಿಗೆ ಶ್ರಮಿಸಬೇಕು. ಡಬಲ್ ಇಂಜಿನ್ ಸರ್ಕಾರದ ಕೊಡುಗೆಯನ್ನು ಜನರಿಗೆ ತಿಳಿಸಿ ಪ್ರಚಾರ ನಡೆಸಿ ಎಂದು ಕರೆ ನೀಡಿದರು.