ದೇಶ್‌ಮುಖ್ ನಿವಾಸದ ಮೇಲೆ ಸಿಬಿಐ ದಾಳಿ


ಮುಂಬೈ,ಏ.೨೪- ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್‌ದೇಶ್‌ಮುಖ್ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಿ ದಾಖಲೆಗಳನ್ನು ಜಾಲಾಡಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ದೇಶ್‌ಮುಖ್ ವಿರುದ್ಧ ಎಫ್‌ಐಆರ್ ದಾಖಲಿಸಿದ ಬೆನ್ನಲ್ಲೆ ಸಿಬಿಐ ದಾಳಿ ಮಾಡಿದೆ.
ಲಂಚ ಪ್ರಕರಣದಲ್ಲಿ ಮುಂಬೈನ ಐಪಿಎಸ್ ಅಧಿಕಾರಿ ಪರಂಬೀರ್‌ಸಿಂಗ್ ಮಾಡಿದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ದೇಶ್‌ಮುಖ್ ವಿರುದ್ಧ ಎಫ್‌ಐಆರ್ ದಾಖಲಿಸಿ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ದಾಖಲೆಪತ್ರಗಳನ್ನು ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ೧೦೦ ಕೋಟಿ ರೂ. ಲಂಚ ಸಂಗ್ರಹಿಸುವಂತೆ ಅಮಾನತುಗೊಂಡಿರುವ ಮುಂಬೈ ಪೊಲೀಸ್ ಅಧಿಕಾರಿ ಸಚಿನ್‌ವಾಜೆಗೆ ಅನಿಲ್‌ದೇಶ್‌ಮುಖ್ ಸೂಚನೆ ನೀಡಿದ್ದರು ಎಂದು ಐಪಿಎಸ್ ಅಧಿಕಾರಿ ಪರಂಬೀರ್ ಸಿಂಗ್ ಮಾಡಿದ ಆರೋಪ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು.
ಬಾರ್‌ಗಳು, ರೆಸ್ಟೊರೆಂಟ್‌ಗಳು ಮತ್ತು ಹೋಟೆಲ್‌ಗಳಿಂದ ಹಣ ಸಂಗ್ರಹಿಸಲು ಅನಿಲ್‌ದೇಶ್‌ಮುಖ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾಗಿ ಪರಂಬೀರ್‌ಸಿಂಗ್ ಮುಖ್ಯಮಂತ್ರಿ ಉದ್ಧವ್‌ಠಾಕ್ರೆ ಅವರಿಗೆ ಪತ್ರ ಬರೆದು ಗಂಭೀರ ಆರೋಪ ಮಾಡಿದರು.
ಈ ಪ್ರಕರಣದ ನೈತಿಕ ಹೊಣೆಹೊತ್ತು ದೇಶ್‌ಮುಖ್ ರಾಜೀನಾಮೆ ನೀಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶ್‌ಮುಖ್ ವಿರುದ್ಧ ಸಿಬಿಐ ತನಿಖೆ ನಡೆಸಬೇಕೆಂದು ಪರಂಬೀರ್‌ಸಿಂಗ್ ಬಾಂಬೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು.