ದೇಶಾಭಿಮಾನದಿಂದ ರಾಷ್ಟ್ರದ ಅಖಂಡತೆ ಸಾಧ್ಯ

ಕಲಬುರಗಿ,ಜು.26: ದೇಶದ ರಕ್ಷಣೆ ಕೇವಲ ಸೈನಿಕರಿಗೆ ಮಾತ್ರ ಸೀಮಿತವಲ್ಲ. ದೇಶದ ಪ್ರತಿಯೊಬ್ಬ ನಾಗರಿಕ ತನ್ನ ಸ್ವಂತ ಕುಟುಂಬ, ಆಸ್ತಿ, ತಮ್ಮವರ ಬಗ್ಗೆ ಇರುವ ಅಭಿಮಾನದ ಜೊತೆಗೆ ಅದರಷ್ಟೇ ಅಭಿಮಾನ ದೇಶಕ್ಕೆ ತೋರಿಸಬೇಕು. ಇದರಿಂದ ದೇಶದಲ್ಲಿ ಪ್ರದೇಶ, ಭಾಷೆ, ಜಾತಿ, ಧರ್ಮಗಳ ಆಧಾರದ ಮೇಲೆ ಕಲಹಗಳಾಗದೆ, ನಾವೆಲ್ಲರೂ ಒಂದೇ ಎಂಬ ಅಖಂಡತೆ, ಸಾರ್ವಭೌಮತೆ ರಕ್ಷಣೆಯಾಗಲು ಸಾಧ್ಯವಾಗುತ್ತದೆ ಎಂದು ಮಾಜಿ ಯೋಧ ರೇಣುಕಾಚಾರ್ಯ ಸ್ಥಾವರಮಠ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್. ನಗರದಲ್ಲಿರುವ ‘ಕೊಹಿನೂರ ಕಂಪ್ಯೂಟರ್ ತರಬೇತಿ ಕೇಂದ್ರ’ದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಕಾರ್ಗಿಲ್ ವಿಜಯ ದಿವಸ’ ಪ್ರಯುಕ್ತ ಹುತಾತ್ಮ ಯೋಧರಿಗೆ ನಮನ ಹಾಗೂ ಮಾಜಿ ಯೋಧರಿಗೆ ಗೌರವ ಸತ್ಕಾರ ಸಮಾರಂಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸೈನಿಕರಿಗೆ ತಮ್ಮ ಕುಟುಂಬಕ್ಕಿಂತ ದೇಶದ ಹಿತರಕ್ಷಣೆಯೆ ಮುಖ್ಯವಾಗಿರುತ್ತದೆ. ನೂರಾರು ಯೋಧರು ತಮ್ಮ ಜೀವವನ್ನು ನೀಡಿ ದೇಶವನ್ನು ಕಾಪಾಡಿ ಕಾರ್ಗಿಲ್ ಯುದ್ಧದಲ್ಲಿ ವಿಜಯವನ್ನು ಸಾಧಿಸಿದ್ದಾರೆ. ಇದು ವಿರೋಧಿ ದೇಶಗಳಿಗೆ ಒಂದು ಸಂದೇಶವಾಗಿದೆ. ಭಾರತೀಯರ ಸೈನಿಕರು ಮೂಲತಃ ಅಹಿಂಸಾವಾದಿಗಳು. ದೇಶದ ಹಿತಕ್ಕೆ ದಕ್ಕೆ ಬಂದಾಗ ತಮ್ಮ ಜೀವದ ಬಗ್ಗೆ ಎಂದಿಗೂ ಕೂಡಾ ಚಿಂತಿಸುವುದಿಲ್ಲ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸೈನ್ಯಕ್ಕೆ ಸೇರ್ಪಡೆಯಾಗಿ ತಾಯಿ ಭಾರತಾಂಬೆಯ ಸೇವೆ ಮಾಡಬೇಕು. ಸೈನಿಕರಿಗೆ ಸಾವಿಲ್ಲ, ಅವರ ಸೇವೆ ಅಜರಾಮರಮ. ಸೈನಿಕರಿಗೆ ಸಿಗಬೇಕಾದ ಎಲ್ಲಾ ಸೌಕರ್ಯಗಳನ್ನು ಸೂಕ್ತ ಸಂದರ್ಭದಲ್ಲಿ ದೊರೆಯಲಿಯೆಂದು ಆಶಿಸಿದರು.
ಕಜಾಪ ಜಿಲ್ಲಾಧ್ಯಕ್ಷ ಎಂ.ಬಿ.ನಿಂಗಪ್ಪ ಅವರು ಸೈನಿಕರ ಸೇವೆಯನ್ನು ಕುರಿತು ಗೀತೆಯನ್ನು ಹಾಡಿದರು. ಮಾಜಿ ಯೋಧ ಸಂಗಪ್ಪ ಮುಗಳಿ, ಸಂಸ್ಥೆಯ ಮುಖ್ಯಸ್ಥ ಸತೀಶ ಟಿ.ಸಣಮನಿ, ಪ್ರಮುಖರಾದ ಎಚ್.ಬಿ.ಪಾಟೀಲ, ಡಾ.ಸುನೀಲಕುಮಾರ ಎಚ್.ವಂಟಿ, ಬಸಯ್ಯಸ್ವಾಮಿ ಹೊದಲೂರ, ಶರಣಬಸಪ್ಪ ಮಾಲಿಬಿರಾದಾರ ದೇಗಾಂವ, ಚನ್ನಬಸಪ್ಪ ಗಾರಂಪಳ್ಳಿ, ವೀರಣ್ಣ ಡಿ.ಪಟ್ಟಣ, ಪ್ರಕಾಶ ಸರಸಂಬಿ ಸೇರಿದಂತೆ ಹಲವರಿದ್ದರು.