ದೇಶಾದ್ಯಂತ 4.39 ಕೋಟಿ ನಕಲಿ ಪಡಿತರ ಚೀಟಿ ರದ್ದು

ನವದೆಹಲಿ,ನ. 6- ದೇಶಾದ್ಯಂತ ನಕಲಿ ಪಡಿತರ ಚೀಟಿದಾರರ ವಿರುದ್ದ ಸಮರ ಸಾರಿರುವ ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣೆ ಇಲಾಖೆ , ಬರೋಬ್ಬರಿ 4.39 ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದು ಪಡಿಸಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆ ಆಧುನೀಕರಿಸಲು ಮತ್ತು ಪಡಿತರ ಫಲಾನುಭವಿಗಳ ದತ್ತಾಂಶಗಳ ಡಿಜಿಟಲೀಕರಣ, ಆಧಾರ್ ಅಳವಡಿಕೆ, ನಕಲಿ ಪಡಿತರ ಚೀಟಿಗಳ ಪತ್ತೆ ಕಾರ್ಯಾಚರಣೆಯ ಮೂಲಕ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಲು ಮುಂದಾಗಿದೆ‌

ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2013 ರಿಂದ 2020 ರವರೆಗೆ ಒಟ್ಟು 4.39 ಕೋಟಿ ಅನರ್ಹ , ನಕಲಿ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಬಿಡುಗಡೆಯಾದ ಪಾಲನ್ನು ಸಂಬಂಧಪಟ್ಟ ರಾಜ್ಯ ಕೇಂದ್ರಾಡಳಿತ ಪ್ರದೇಶಗಳು ನಿಯಮಿತವಾಗಿ ಎನ್‌ಎಫ್‌ಎಸ್‌ಎ ಅಡಿಯಲ್ಲಿ ಸೂಕ್ತ ಫಲಾನುಭವಿಗಳನ್ನು ತಲುಪಲು ಬಳಸಿಕೊಳ್ಳುತ್ತಿವೆ.

ಕಾಯಿದೆಯಡಿ ಪ್ರತಿ ರಾಜ್ಯಗಳು,ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯಾಖ್ಯಾನಿಸಲಾದ ವ್ಯಾಪ್ತಿಯ ಮಿತಿಗಳಲ್ಲಿ ನೈಜ, ಅರ್ಹ ಫಲಾನುಭವಿಗಳು,‌ ಕುಟುಂಬಗಳಿಗೆ ಹೊಸ ಪಡಿತರ ಚೀಟಿಗಳನ್ನು ನೀಡುವ ಮೂಲಕ ಪಾಲು ಬಳಸಿಕೊಳ್ಳುತ್ತಿವೆ ಎಂದು ಇಲಾಖೆ ತಿಳಿಸಿದೆ.

2011 ರ ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆಯ ಸುಮಾರು ಮೂರನೇ ಎರಡರಷ್ಟು ಅಂದರೆ, 81.35 ಕೋಟಿ ಜನರು ಟಿಪಿಡಿಎಸ್ ಮೂಲಕ ಸಬ್ಸಿಡಿ ಆಹಾರ ಧಾನ್ಯಗಳನ್ನು ಪಡೆಯಲು ಎನ್ಎಫ್ಎಸ್ಎ ಅವಕಾಶ ಒದಗಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಪ್ರಸ್ತುತ, ಎನ್‌ಎಫ್‌ಎಸ್‌ಎ ಅಡಿಯಲ್ಲಿ ದೇಶದಲ್ಲಿ 80 ಕೋಟಿಗೂ ಹೆಚ್ಚು ಜನರು ಪ್ರತಿ ತಿಂಗಳು ಕೇಂದ್ರದ ಹೆಚ್ಚು ಸಬ್ಸಿಡಿಯ ಬೆಲೆಗಳಲ್ಲಿ ಪ್ರತಿ ಕೆ.ಜಿ.ಗೆ ಕ್ರಮವಾಗಿ 3, 2 ಮತ್ತು 1.ರೂ.ಗಳಲ್ಲಿ ಅಕ್ಕಿ, ಗೋಧಿ ಮತ್ತು ಒರಟು ಧಾನ್ಯಗಳನ್ನು ಪಡೆಯುತ್ತಿದ್ದಾರೆ ಎಂದು ತನ್ನ ಹೇಳಿಕೆಯಲ್ಲಿ ತಿಳಿಸಿದೆ.