ದೇಶಾದ್ಯಂತ ಶೇ.60 ರಷ್ಟು ಗ್ರಾಮೀಣಕುಟುಂಬಗಳಿಗೆ ನಲ್ಲಿ ಮೂಲಕ ನೀರು ಸಂಪರ್ಕ

ನವದೆಹಲಿ,ಏ.4-ದೇಶಾದ್ಯಂತ ಶೇಕಡ 60 ರಷ್ಟು ಗ್ರಾಮೀಣ ಪ್ರದೇಶಗಳ ಮನೆಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕವನ್ನು ನಲ್ಲಿಯ ಮೂಲಕ ಕಲ್ಪಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಜಲಶಕ್ತಿ ಸಚಿವಾಲಯ, ದೇಶಾದ್ಯಾಂತ ‘ಹರ್ ಘರ್ ಜಲ್’ ಯೋಜನೆಯಡಿ 1 ಲಕ್ಷದ 55 ಸಾವಿರ ಹಳ್ಳಿಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

2024ರ ವೇಳೆಗೆ ದೇಶಾದ್ಯಂತ ಎಲ್ಲಾ ಗ್ರಾಮೀಣ ಜನವಸತಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕವನ್ನು ಒದಗಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದೆ.

2019ರ ಆಗಸ್ಟ್ 15 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಜಲ್‍ಜೀವನ್ ಮಿಷನ್ ಯೋಜನೆಯಡಿ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ ಪ್ರಕಟಿಸಿದ್ದರು.

ಯೋಜನೆ ಆರಂಭವಾದಾಗ ದೇಶಾದ್ಯಂತ 19 ಕೋಟಿ ಗ್ರಾಮೀಣ ಕುಟುಂಬಗಳ ಪೈಕಿ ಮೂರು ಕೋಟಿ ಕುಟುಂಬಗಳಿಗೆ ನಲ್ಲಿಯ ಮೂಲಕ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು, ಇದೀಗ 11 ಕೋಟಿ 66 ಲಕ್ಷ ಗ್ರಾಮೀಣ ಮನೆಗಳಿಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಜಲಶಕ್ತಿ ಸಚಿವಾಲಯ ತಿಳಿಸಿದೆ.

ಶೇ.100 ರಷ್ಟು ಸಂಪರ್ಕ:

ಐದು ರಾಜ್ಯಗಳಾದ ಗುಜರಾತ್, ತೆಲಂಗಾಣ, ಗೋವಾ, ಹರಿಯಾಣ, ಪಂಜಾಬ್ ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ, ದಾಮನ್ ಮತ್ತು ದಿಯು ಮತ್ತು ದಾದ್ರಾ ನಗರ್ ಹವೇಲಿ ಮತ್ತು ಪುದುಚೆರಿಯಲ್ಲಿ ಶೇಕಡ 100 ರಷ್ಟು ಮನೆಗಳಿಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ ಎಂದು ಸಚಿವಾಲಯ ತನ್ನ ಮಾಹಿತಿಯಲ್ಲಿ ಈ ವಿಷಯ ತಿಳಿಸಿದೆ.