ದೇಶಾದ್ಯಂತ ಲಾಕ್‌ಡೌನ್ ಇಲ್ಲ ಕೇಂದ್ರದ ಸ್ಪಷ್ಟನೆ


ಬೆಂಗಳೂರು,ಏ.೩೦- ದೇಶದಲ್ಲಿ ಕೊರೊನಾ ೨ನೇ ಅಲೆಯನ್ನು ತಡೆಯಲು ದೇಶವ್ಯಾಪಿ ಲಾಕ್‌ಡೌನ್ ಜಾರಿ ಮಾಡುವ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ್ದು, ಕೊರೊನಾ ತಡೆಗೆ ರಾಷ್ಟ್ರವ್ಯಾಪಿ ಲಾಕ್‌ಡೌನ್ ಜಾರಿ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ,
ದೇಶದಲ್ಲಿ ಕೊರೊನಾ ತಡೆಗೆ ಲಾಕ್‌ಡೌನ್ ಜಾರಿ ಮಾಡುವ ಪ್ರಸ್ತಾಪವಿಲ್ಲ. ಅದರ ಬದಲು ಕೇಂದ್ರ ಹಾಗೂ ರಾಜ್ಯಸರ್ಕಾರಗಳು, ಕೇಂದ್ರ ಆರೋಗ್ಯ ಇಲಾಖೆ ಸೂಚಿಸಿರುವ ಕಂಟೈನ್ಮೆಂಟ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು ಎಂದು ಕೇಂದ್ರದ ಗೃಹ ಸಚಿವಾಲಯ ಹೇಳಿದೆ.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ ಜಾರಿಯಾಗಬೇಕು ಎಂಬ ಮಾತುಗಳು ಕೇಳು ಬರುತ್ತಿರುವಾಗಲೇ ಕೇಂದ್ರ ಇಲಾಖೆ ಲಾಕ್‌ಡೌನ್ ಜಾರಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ದೇಶವ್ಯಾಪಿ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ಸುದ್ದಿಗಳಿಗೆ ತಡೆ ಹಾಕಿದೆ.
ಲಾಕ್‌ಡೌನ್ ಬದಲಿ ಕೇಂದ್ರದ ಆರೋಗ್ಯ ಇಲಾಖೆಯ ಆರೋಗ್ಯ ಸೂಚನೆಗಳು, ವಿಪತ್ತು ನಿರ್ವಹಣಾ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ಕೇಂದ್ರ ಗೃಹ ಇಲಾಖೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಆಮ್ಲಜನಕ, ಔಷಧಿ ಸೇರಿದಂತೆ ಎಲ್ಲ ವಿಚಾರಗಳಲ್ಲೂ ಕೇಂದ್ರದ ಜತೆ ಸಮನ್ವಯ ಕಾಯ್ದುಕೊಳ್ಳಿ ಎಂದು ಸಲಹೆ ಮಾಡಿದೆ.