
ನವದೆಹಲಿ,ಮೇ.೭-ದೇಶಾದ್ಯಂತ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳ ನೀಟ್ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ ೩ ಗಂಟೆಗೆ ಪರೀಕ್ಷೆ ಆರಂಭವಾಗಲಿದ್ದು, ಪರೀಕ್ಷಾರ್ಥಿಗಳು ಮಧ್ಯಾಹ್ನ ೧೨:೩೦ರೊಳಗೆ ಪರೀಕ್ಷೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ದೇಶಾದ್ಯಂತ ೨೦ ಲಕ್ಷದ ೮೭ ಸಾವಿರದ ೪೪೫ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ೧ ಲಕ್ಷದ ೩೪ ಸಾವಿರದ ೩೭೯ ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ನೋಂದಾಯಿತ ವಿದ್ಯಾರ್ಥಿಗಳ ೧೪ ಸಾವಿರದ ೭೫೩ ವಿದ್ಯಾರ್ಥಿಗಳು ಹೆಚ್ಚಾಗಿ ಪರೀಕ್ಷೆ ಬರೆಯುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಮಧ್ಯಾಹ್ನ ೨ ರಿಂದ ೫:೨೦ ರವರೆಗೆ ಪರೀಕ್ಷೆ ನಡೆಯಲಿದೆ. ನೀಟ್ ಪರೀಕ್ಷೆ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಮುಖ್ಯವೆಂದು ಪರಿಗಣಿಸಲಾಗಿದೆ. ಅದರಲ್ಲೂ ಕೋವಿಡ್ ಸಾಂಕ್ರಾಮಿಕ ರೋಗ ಉಲ್ಬಣಗೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಕೋರ್ಸ್‌ಗಳಿಗೆ ಬೇಡಿಕೆಯೂ ಹೆಚ್ಚಾಗಿದೆ.
ನೀಟ್ ಪರೀಕ್ಷೆಯನ್ನು ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒರಿಯಾ, ತಮಿಳು, ತೆಲುಗು, ಉರ್ದು ಮತ್ತು ಪಂಜಾಬಿ ಸೇರಿದಂತೆ ಬಹುಭಾಷೆಗಳಲ್ಲಿ ನಡೆಸಲಾಗುತ್ತಿದೆ. ಪರೀಕ್ಷೆಗೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್, ಬ್ಲೂಟೂತ್, ವಾಚ್‌ಗಳು, ಆಭರಣಗಳನ್ನು ಪರೀಕ್ಷಾ ಕೇಂದ್ರಕ್ಕೆ ಕೊಂಡ್ಯೂಯುವಂತಿಲ್ಲ. ಪರೀಕ್ಷಾ ಪ್ರಾಧಿಕಾರ ಒದಗಿಸಿರುವ ಡ್ರೆಸ್ ಕೋಡ್ ಮಾರ್ಗಸೂಚನೆಗಳನ್ನು ಅನುಸರಿಸುವಂತೆ ಸೂಚಿಸಲಾಗಿದ್ದು, ಅರ್ಧತೋಳಿನ ಬಟ್ಟೆಗಳನ್ನು ಮಾತ್ರ ಧರಿಸಲು ಅವಕಾಶ ನೀಡಲಾಗಿದ್ದು, ವಿದ್ಯಾರ್ಥಿಗಳು ಚಪ್ಪಲಿ ಧರಿಸಿ ಪರೀಕ್ಷೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಮಣಿಪುರದಲ್ಲಿ ಮುಂದೂಡಿಕೆ
ಮಣಿಪುರದಲ್ಲಿ ಮೇಟಿ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡುವ ಪ್ರಸ್ತಾವನೆಯಿಂದಾಗಿ ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರವಾಗಿದ್ದು, ಪರಿಸ್ಥಿತಿ ಬಿಗುವಾಗಿ ಕೂಡಿದೆ. ಅಸ್ಥಿರ ಪರಿಸ್ಥಿತಿಯ ಪರಿಣಾಮವಾಗಿ ನೀಟ್ ಪರೀಕ್ಷೆಯನ್ನು ಮುಂದೂಡಲಾಗಿದೆ. ಈ ರಾಜ್ಯದಲ್ಲಿ ಪರೀಕ್ಷಾ ದಿನಾಂಕವನ್ನು ಪ್ರಕಟಿಸುವುದಾಗಿ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.