ದೇಶಾದ್ಯಂತ ತಿರಂಗಾ ಅಭಿಯಾನಕ್ಕೆ ಮೋದಿ ಕರೆ

ನವದೆಹಲಿ, ಜು.೩೧- ದೇಶದ ಸ್ವಾತಂತ್ರ್ಯ ಮಹೋತ್ಸವದ ೭೫ ನೇ ವರ್ಷಾಚರಣೆಯ ಹಿನ್ನೆಲೆಯಲ್ಲಿ ಆಗಸ್ಟ್ ೧೩ ರಿಂದ ೧೫ರವರೆಗೆ “ಹರ್ ಘರ್ ತಿರಂಗ” ಅಭಿಯಾನವನ್ನು ದೇಶಾದ್ಯಂತ “ಸಾಮೂಹಿಕ ಆಂದೋಲನ”ವಾಗಿ ಕೈಗೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆನೀಡಿದ್ದಾರೆ.
ಸಾಮೂಹಿಕ ಅಭಿಯಾನದಲ್ಲಿ ಎಲ್ಲರೂ ಪಾಲ್ಗೊಳ್ಳುವ ಜೊತೆಗೆ ದೇಶಾದ್ಯಂತ ಜನರು ಆಗಸ್ಟ್ ೨ ರಿಂದ ೧೫ರ ನಡುವೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತ್ರಿವರ್ಣ ಧ್ವಜವನ್ನು ತಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಲೂ ಕೂಡ ಕಿವಿಮಾತು ಹೇಳಿದ್ದಾರೆ.
ಆಕಾಶವಾಣಿಯ ತಿಂಗಳ ಕಾರ್ಯಕ್ರಮ ’ಮನ್ ಕಿ ಬಾತ್ನ ೯೧ನೇ ಸರಣಿಯಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು “ಹರ್ ಘರ್ ತಿರಂಗ” ಅಭಿಯಾನದ ಭಾಗವಾಗಿ ಪ್ರತಿಯೊಬ್ಬರ ಮನೆಯ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ತ್ರಿವರ್ಣ ಧ್ವಜದ ಮೇಲಿನ ಅಭಿಮಾನ ಮತ್ತು ಗೌರವ ಮತ್ತಷ್ಟು ಹೆಚ್ಚುವಂತೆ ಮಾಡಿಎಂದಿದ್ದಾರೆ.
ರೈಲುನಿಲ್ದಾಣಗಳಿಗೆ ಭೇಟಿನೀಡಿ:
‘ಆಜಾದಿ ಕಿ ರೈಲ್‌ಗಾಡಿ ಔರ್ ರೈಲು ನಿಲ್ದಾಣ’ ಎಂಬ ಉಪಕ್ರಮದ ಮೂಲಕ, ಸ್ವಾತಂತ್ರ್ಯ ಹೋರಾಟದಲ್ಲಿ ಭಾರತೀಯ ರೈಲ್ವೆಯ ಪಾತ್ರವನ್ನು ಜನರಿಗೆ ತಿಳಿಸುವುದು ಎಂಬ ಉದ್ದೇಶ ಹೊಂದಲಾಗಿದೆ. ಐತಿಹಾಸಿಕ ಪ್ರಾಮುಖ್ಯತೆಯ ಅದರಲ್ಲಿಯೂ ವಿಶೇಷವಾಗಿ ಭಾರತೀಯರಿಗೆ ಸಂಬಂಧಿಸಿದ ರೈಲು ನಿಲ್ದಾಣಗಳಿಗೆ ಭೇಟಿ ನೀಡುವಂತೆ ಜನರಿಗೆ ಮನವಿ ಮಾಡಿದ್ದಾರೆ.
“ದೇಶದಲ್ಲಿ ಇಂತಹ ಅನೇಕ ರೈಲುನಿಲ್ದಾಣಗಳಿವೆ, ಅವು ಸ್ವಾತಂತ್ರ್ಯ ಚಳವಳಿಯ ಇತಿಹಾಸದೊಂದಿಗೆ ಸಂಬಂಧ ಹೊಂದಿವೆ. ಈ ರೈಲು ನಿಲ್ದಾಣಗಳ ಬಗ್ಗೆ ತಿಳಿದರೆ ನೀವೂ ಆಶ್ಚರ್ಯ ಪಡುತ್ತೀರಿ ಎಂದು ಹೇಳಿದ್ದಾರೆ.
ದೇಶದ ೭೫ ನಿಲ್ದಾಣಗಳನ್ನು ವಿಶೇಷವಾಗಿ ಅಲಂಕರಿಸಲಾಗಿದೆ ಮತ್ತು ಭಾರತದ ಸ್ವಾತಂತ್ರ್ಯದ ೭೫ನೇ ವರ್ಷದ ಆಚರಣೆಯ ಭಾಗವಾಗಿ ಅಂತಹ ಸ್ಥಳಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹತ್ತಿರದ ಶಾಲೆಗಳ ಶಿಕ್ಷಕರು ಅಂತಹ ಕೇಂದ್ರಗಳಿಗೆ ಭೇಟಿನೀಡುವಂತೆ ವಿನಂತಿಸಿದ್ದಾರೆ.
೧ ಲಕ್ಷ ಮಾದರಿ:
ಕೋವಿಡ್ ಸೋಂಕು ಇನ್ನೂ ಇರುವ ಸಂದರ್ಭದಲ್ಲಿ ಔಷಧೀಯ ಮೌಲ್ಯ ಹೊಂದಿರುವ ಸಸ್ಯಗಳ ಸಂಶೋಧನೆಯಲ್ಲಿ ಗಣನೀಯ ಬೆಳವಣಿಗೆ ಕಂಡುಬಂದಿದೆ. ಇದು ಉತ್ತಮ ಆರಂಭ. ಇದೇ ಜುಲೈನಲ್ಲಿ ಭಾರತೀಯ ವರ್ಚುವಲ್ ಹರ್ಬೇರಿಯಂ ಪ್ರಾರಂಭಿಸಲಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ವರ್ಚುವಲ್ ಹರ್ಬೇರಿಯಂನಲ್ಲಿ ಸಂರಕ್ಷಿತ ಸಸ್ಯಗಳು ಅಥವಾ ಸಸ್ಯ ಭಾಗಗಳ ಡೇಟಾಬೇಸ್ ಇದೆ, ಅದು ವೆಬ್‌ನಲ್ಲಿ ಉಚಿತವಾಗಿ ಲಭ್ಯವಿದೆ. ೧ ಲಕ್ಷಕ್ಕೂ ಹೆಚ್ಚು ಮಾದರಿಗಳು ಮತ್ತು ಸಂಬಂಧಿತ ವೈಜ್ಞಾನಿಕ ಮಾಹಿತಿಯೂ ಲಭ್ಯವಿದೆ ಎಂದು ತಿಳಿಸಿದ್ದಾರೆ.
ಶುಭ ಹಾರೈಕೆ
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಎಲ್ಲಾ ಭಾರತೀಯ ಕ್ರೀಡಾಪಟುಗಳಿಗೆ ಶುಭ ಹಾರೈಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಹೆಚ್ಚು ಪದಕ ಗೆಲ್ಲುವ ಮೂಲಕ ಭಾರತದ ಕೀರ್ತಿ ಪತಾಕೆ ಎತ್ತಿಹಿಡಿಯಿರಿ ಎಂದು ಅವರು ಹೇಳಿದ್ದಾರೆ.

ಶಿರಸಿ ರೈತನ ಗುಣಗಾನ
ಶಿರಸಿ ತಾಲ್ಲೂಕಿನ ತಾರಗೋಡ ಗ್ರಾಮದ ಜೇನು ಕೃಷಿಕ ಮಧುಕೇಶ್ವರ ಹೆಗಡೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.


ದೇಶದ ವಿವಿಧೆಡೆಯ ಜೇನು ಕೃಷಿಕರು, ಆಯುರ್ವೇದಿಕ್ ಗಿಡಮೂಲಿಕೆ ಬೆಳೆಗಾರರನ್ನು ಶ್ಲಾಘಿಸಿದ ಪ್ರಧಾನಿ, ಮಧುಕೇಶ್ವರ ಅವರ ಜೇನು ಕೃಷಿ ಸಾಧನೆಯನ್ನು ವಿಶೇಷವಾಗಿ ಕೊಂಡಾಡಿದರು.
೫೦ ಜೇನು ಕಾಲೋನಿಗೆ ಸರ್ಕಾರದ ಸಹಾಯಧನ ಸೌಲಭ್ಯ ಪಡೆದಿದ್ದ ಮಧುಕೇಶ್ವರ ಹೆಗಡೆ ಈಗ ೮೦೦ ಜೇನು ಕಾಲೋನಿ ಪೋಷಿಸುತ್ತಿದ್ದಾರೆ. ಹಲವಾರು ಟನ್ ಜೇನುತುಪ್ಪ ಉತ್ಪಾದಿಸುವ ಅವರು ನೇರಳೆ ಜೇನುತುಪ್ಪ, ತುಳಸಿ ಜೇನುತುಪ್ಪ, ಆಮ್ಲ ಜೇನುತುಪ್ಪ ಸೇರಿದಂತೆ, ವನಸ್ಪತಿ ಜೇನುತುಪ್ಪಗಳನ್ನೂ ಉತ್ಪಾದಿಸುವುದು ವಿಶೇಷವೆನಿಸಿದೆ. ಜೇನುಕೃಷಿಯ ಸಾಧನೆ ಅವರ ಹೆಸರನ್ನು ಪ್ರಸಿದ್ಧಿಗೆ ತಂದಿದೆ’ ಎಂದು ಬಣ್ಣಿಸಿದ್ದಾರೆ.