ದೇಶಾದ್ಯಂತ ಜೈಲರ್ ಬಿಡುಗಡೆ ಭರ್ಜರಿ ಓಪನಿಂಗ್

ಬೆಂಗಳೂರು, ಆ.೧೦- ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುತಾರಾಗಣದ “ಜೈಲರ್” ಚಿತ್ರ ರಾಜ್ಯ ಸೇರಿದಂತೆ ದೇಶ ವಿದೇಶಗಳಲ್ಲಿ ಸಾವಿರಾರು ಚಿತ್ರಮಂದಿರದಲ್ಲಿ ಇಂದು ಬಿಡುಗಡೆಯಾಗಿದ್ದು ಭಾರೀ ಸದ್ದು ಮಾಡಿದೆ. ಮೊದಲ ಪ್ರದರ್ಶನದಲ್ಲೇ ತಮ್ಮ ನೆಚ್ಚಿನ ನಟನ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಚಿತ್ರಮಂದಿರಕ್ಕೆ ಲಗ್ಗೆ ಹಾಕಿದ್ದಾರೆ.ಚಿತ್ರದಲ್ಲಿ ಶಿವರಾಜ್ ಕುಮಾರ್, ತಮನ್ನಾ ಭಾಟಿಯಾ ಸೇರಿದಂತೆ ಬಹುಭಾಷೆಯ ಕಲಾವಿದರು ಚಿತ್ರದಲ್ಲಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟು ಮಾಡಿದ್ದು ಅಭಿಮಾನಿಗಳ ಉತ್ಸಾಹಕ್ಕೆ ಪಾರವೇ ಇಲ್ಲದಂತಾಗಿದೆ
ಜೈಲರ್ ಚಿತ್ರ ಕನ್ನಡ, ತಮಿಳು, ತೆಲುಗು, ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಗೆ ಬಂದಿದೆ. ಚಿತ್ರದಲ್ಲಿ ರಜನಿಕಾಂತ್ ಅವರ ಅಭಿನಯ ಮತ್ತಷ್ಟು ಆಕ್ಷನ್ ಸನ್ನಿವೇಶಗಳನ್ನು ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ.
ಮೋಡಿ ಮಾಡಿದ ಹಾಡು:
ಚಿತ್ರದ “ಕಾವಾಲಯ್ಯ” ಹಾಡು ಜೈಲರ್ ಚಿತ್ರ ಬಿಡುಗಡೆಗೆ ಮುನ್ನವೇ ಮೋಡಿ ಮಾಡಿದ್ದು ಎಲ್ಲೆಡೆ ವೈರಲ್ ಆಗಿತ್ತು. ನಟಿ ತಮನ್ನಾ ಭಾಟಿಯಾ ಹಾಕಿರುವ ಹೆಜ್ಜೆ ಅಭಿಮಾನಿಗಳಲ್ಲಿ ಹೊಸ ಸಂಚನಲ ಸೃಷ್ಟಿಸಿದೆ.ಈ ಹಾಡಿನಲ್ಲಿ ತಮನ್ನಾ ಜೊತೆ ರಜನಿಕಾಂತ್ ಕೂಡ ಹೆಜ್ಜೆ ಹಾಕಿದ್ದಾರೆ. ಈ ಹಾಡು ಭಾರತದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲೂ ಕೂಡ ಬಾರಿ ಸದ್ದು ಮಾಡಿದ್ದು ಚಿತ್ರ ಮೊದಲ ದಿನ ಎರಡನೇ ಉತ್ತಮ ಪ್ರತಿಕ್ರಿಯೆ ಪಡೆದಿದೆ.

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಚಿತ್ರವನ್ನು ವೀಕ್ಷಿಸಲು ರಜನಿ ಸ್ನೇಹಿತ ರಾಜ್ ಬಹುದ್ದೂರ್ ಬಾಲಾಜಿ ಚಿತ್ರಮಂದಿರಕ್ಕೆ ಅಗಮಿಸಿದರು.

ಬೆಂಗಳೂರಿನಲ್ಲಿ ಸಂಭ್ರಮ
ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಜೈಲರ್ ಇಂದು ದೇಶಾದ್ಯಂತ ತೆರೆ ಕಂಡಿದ್ದು, ಅಭಿಮಾನಿಗಳ ಹರ್ಷಕ್ಕೆ ಪಾರವೇ ಇಲ್ಲದಂತಾಗಿದೆ.
ಬೆಂಗಳೂರಿನ ವಿವಿಧ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ರಜನಿಕಾಂತ್ ವೇಷಧಾರಿಯಾಗಿ ಕಾಣಿಸಿಕೊಳ್ಳುವ ಮೂಲಕ ಜೈಲರ್ ಚಿತ್ರಕ್ಕೆ ಅದ್ದೂರಿ ಸ್ವಾಗತ ನೀಡಿದ್ದಾರೆ.
ರಜನಿಕಾಂತ್ ಅವರ ಆಪ್ತ ಗೆಳೆಯ ರಾಜ್ ಬಹದ್ದೂರ್ ಅವರು ಬಾಲಾಜಿ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿ ಗೆಳೆಯನ ಚಿತ್ರಕ್ಕೆ ಶುಭ ಕೋರಿದ್ದಾರೆ.

ಥಿಯೇಟರ್‌ಗೆ ಜೈಲರ್ ಚಿತ್ರ ವೀಕ್ಷಣೆಗೆ ಅಭಿಮಾನಿಗಳು ಬಂದಿದ್ದು ಹೀಗೆ.

ಕನ್ನಡ ಚಿತ್ರಗಳಿಗೆ ಹೊಡೆತ:
ಜೈಲರ್ ಚಿತ್ರ ರಾಜ್ಯಾದ್ಯಂತ ಅತ್ಯಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೂಲಕ ಈಗಾಗಲೇ ಯಶಸ್ವಿಯಾಗಿ ಮುನ್ನೆಡೆಯುತ್ತಿರುವ ಮೂರು ಚಿತ್ರಗಳಿಗೆ ಹೊಡೆತ ಬಿದ್ದಿದೆ.
ಅನಿವಾರ್ಯವಾಗಿ ವಿತರಕರು ಜೈಲರ್ ಚಿತ್ರಕ್ಕೆ ಹೆಚ್ಚಿನ ಚಿತ್ರಮಂದಿರ ನೀಡಿದ ಹಿನ್ನೆಲೆಯಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಚಿತ್ರಗಳಿಂದ ಚಿತ್ರಮಂದಿರ ಕಸಿದು ಜೈಲರ್ ಚಿತ್ರಕ್ಕೆ ನೀಡಿದ್ದಾರೆ.