ದೇಶವಿರೋಧಿ ಘೋಷಣೆ, ಗೋಡೆಬರಹ ವಿರುದ್ಧ ಕಠಿಣ ಕ್ರಮ

ಮಂಗಳೂರು, ಜ.೧- ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಪಹರಣ, ದರೋಡೆ, ಕಳ್ಳತನ, ಚಾಕು ಇರಿತ, ಹತ್ಯೆ ಸೇರಿದಂತೆ ಮತ್ತಿತರ ಅಪರಾಧ ಪ್ರಕರಣಗಳು ಕಂಡುಬರುತ್ತಿವೆ. ಇವುಗಳನ್ನು ಕಡಿವಾಣ ಹಾಕಲು ಪೊಲೀಸ್ ಇಲಾಖಾ ಅಧಿಕಾರಿಗಳು ಅಗತ್ಯವಿರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು.
ಅವರು ಗುರುರುವಾರ ಜಿಲ್ಲಾಧಿಕಾರಿ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ನಗರದಲ್ಲಿ ಹಾಡ ಹಗಲೇ ಪೊಲೀಸ್ ಸಿಬ್ಬಂದಿಯ ಮೇಲೆ ಅಪರಿಚಿತ ವ್ಯಕ್ತಿಗಳು ಮಾರಣಾಂತಿಕ ಹಲ್ಲೆ ನಡೆಸಿರುವುದು ಅಪರಾಧಿಗಳಿಗೆ ಕಾನೂನಿನ ಭಯ ಇಲ್ಲದಿರುವುದು ಕಂಡು ಬರುತ್ತಿದೆ. ಈ ಪ್ರಕರಣದ ಹಿಂದೆ ಕಾಣದ ಕೈಗಳು ಬುದ್ದಿವಂತಿಕೆಯಿಂದ ಅಮಾಯಕರನ್ನು ಪ್ರಚೋದಿಸುತ್ತಿರುವುದು ಕಂಡು ಬರುತ್ತಿದೆ. ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ದೇಶ ವಿರೋಧಿ ಘೋಷಣೆಗಳನ್ನು ಕೂಗುವುದು ಹಾಗೂ ಗೋಡೆ ಬರಹಗಳನ್ನು ಬರೆಯುವಂತಹ ಅಪರಾಧಗಳು ಸೇರಿದಂತೆ ಅವರಿಗೆ ಪ್ರಚೋದನೆ ನೀಡುವಂತಹ ವ್ಯಕ್ತಿಗಳನ್ನು ಹತ್ತಿಕ್ಕಲು ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, “ಸರ್ವಿಸ್ ಅಪಾರ್ಟ್‌ಮೆಂಟ್‌ಗಳಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂಬ ದೂರು ಕೇಳಿಬರುತ್ತಿದೆ. ಇವುಗಳನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟುವ ಕೆಲಸವಾಗಬೇಕು ಅಲ್ಲದೇ ತಡರಾತ್ರಿ ಖಾಸಗಿ ಸ್ಥಳಗಳಲ್ಲಿ ಅಕ್ರಮವಾಗಿ ಡಿ.ಜೆ. ಪಾರ್ಟಿಗಳು, ಮದ್ಯ ಮಾರಾಟದಂತಹ ಪ್ರಕರಣಗಳು ನಡೆಯುತ್ತಿವೆ, ಇವುಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು” ಎಂದು ತಿಳಿಸಿದರು. ಜಿಲ್ಲೆಯಲ್ಲಿ ಅಪರಾಧಿತ ಪ್ರಕರಣಗಳನ್ನು ತಗ್ಗಿಸಲು ರಾತ್ರಿ ಗಸ್ತು, ಹೈವೇ ಪೆಟ್ರೋಲಿಂಗ್ ಹೆಚ್ಚಿಸಬೇಕು, ಅಲ್ಲದೆ ಹೊರ ರಾಜ್ಯಗಳಿಂದ ಬಂದು ಅಪರಾಧ ಕೃತ್ಯಗಳನ್ನು ಮಾಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿ ಭಾಗದ ಚೆಕ್ ಪೋಸ್ಟ್‌ಗಳಲ್ಲಿ ಹೆಚ್ಚಿನ ಪೋಲಿಸ್ ಸಿಬ್ಬಂದಿಗಳನ್ನು ನಿಯೋಜಿಸುವುದರೊಂದಿಗೆ ಸೂಕ್ಷ್ಮವಾಗಿ ಅಪರಾಧಿ ಚಲನ-ವಲನಗಳನ್ನು ಗಮನಿಸಬೇಕು, ಅಪರಾಧಿಗಳನ್ನು ಪತ್ತೆ ಹಚ್ಚಲು ಅನುಕೂಲವಾಗುವಂತೆ ಆಯಕಟ್ಟಿನ ಸ್ಥಳಗಳಲ್ಲಿ, ಸರ್ಕಲ್‌ಗಳಲ್ಲಿ, ಚೆಕ್‌ಪೋಸ್ಟ್‌ಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಯುವ ಜನರನ್ನು ದಾರಿ ತಪ್ಪಿಸುವಂತಹ ಮಾದಕ ದ್ರವ್ಯ, ಗಾಂಜಾ ಸೇರಿದಂತೆ ಮತ್ತಿತರ ದಾರಿ ತಪ್ಪಿಸುವಂತಹ ಮಾದಕ ವಸ್ತುಗಳ ಮಾರಾಟ ಮಾಡುವುದು ಮತ್ತು ಸಾಗಾಣಿಕೆಯನ್ನು ಪೂರ್ಣ ಪ್ರಮಾಣದಲ್ಲಿ ತಡೆಗಟ್ಟಬೇಕು” ಎಂದರು. ರಸ್ತೆ ಅಪಘಾತ ಪ್ರಕರಣಗಳು ಸಹ ಹೆಚ್ಚಾಗುತ್ತಿವೆ, ಇವುಗಳನ್ನು ತಗ್ಗಿಸಲು ರಸ್ತೆ ಸುರಕ್ಷತಾ ನಿಯಮಗಳನ್ನು ಅಗತ್ಯವಿರುವ ಕಡೆ ಅಳವಡಿಸಬೇಕು ಎಂದ ಅವರು, ರಸ್ತೆ ಅಪಘಾತಗಳಲ್ಲಿ ಗಾಯಗೊಂಡು ವ್ಯಕ್ತಿಗಳನ್ನು ಚಿಕಿತ್ಸೆಗೆ ಕರೆದೊಯ್ಯಲು ಹೆದ್ದಾರಿಗಳಲ್ಲಿ ಆ?ಯಂಬುಲೆನ್ಸ್ ವ್ಯವಸ್ಥೆಗಳನ್ನು ಮಾಡಬೇಕು” ಎಂದು ಸೂಚಿಸಿದರು.
ಜಿಲ್ಲಾದಿಕಾರಿ ಡಾ. ರಾಜೆಂದ್ರ ಕೆ.ವಿ ಮಾತನಾಡಿ, “ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸುವವರು ಸೇರಿದಂತೆ ಪುನರಾವರ್ತಿತ ಅಪರಾಧ ಪ್ರಕರಣಗಳನ್ನು ಮಾಡುವಂತಹ ವ್ಯಕ್ತಿಗಳನ್ನು ಗುರುತಿಸಿ ಅವರ ಮೇಲೆ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಬೇಕು. ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾದವರು ಕಂಡು ಬಂದರೆ ಗೂಂಡಾ ಪಟ್ಟಿಗೆ ಸೇರಿಸಬೇಕು ಅಲ್ಲದೇ ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಕ್ರಮ ವಹಿಸಬೇಕು” ಎಂದರು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಹತೋಟಿಯಲ್ಲಿಡಲು ಎಲ್ಲಾ ಇಲಾಖಾಧಿಕಾರಿಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸಬೇಕು ಎಂದ ಅವರು. ಸಿಸಿ ಕ್ಯಾಮೆರಾ ಅಳವಡಿಸಲು ಅಗತ್ಯವಿರುವ ಅನುದಾನಗಳನ್ನು ಜಿಲ್ಲಾಡಳಿತದಿಂದ ಭರಿಸಲಾಗುವುದು” ಎಂದು ತಿಳಿಸಿದರು. ಸಭೆಯಲ್ಲಿ ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ಲಕ್ಷ್ಮೀ ಪ್ರಸಾದ್, ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ಧರು.