ದೇಶವಾಸಿಗಳಿಗೆ ಶೀಘ್ರ ಲಸಿಕೆ ವಿತರಣೆ

ಚೆನ್ನೈ, ಜ ೮- ಮುಂದಿನ ಕೆಲವು ದಿನಗಳಲ್ಲಿ ದೇಶದ ಜನತೆಗೆ ಮಾರಕ ಕೊರೊನಾಗೆ ಲಸಿಕೆ ವಿತರಿಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಚವರ್ಧನ್ ತಿಳಿಸಿದ್ದಾರೆ.
ಇಂದಿನಿಂದ ದೇಶಾದ್ಯಂತ ಲಸಿಕೆ ತಾಲೀಮು ನಡೆದಿರುವ ಬೆನ್ನಲ್ಲೆ ಆರೋಗ್ಯ ಸಚಿವರಿಂದ ಈ ಹೇಳಿಕೆ ಹೊರಬಿದ್ದಿದೆ.
ಎರಡನೇ ಹಂತದ ತಾಲೀಮು ನಡೆದಿರುವ ಹಿನ್ನೆಲೆಯಲ್ಲಿ ಚೆನ್ನೈಗೆ ಭೇಟಿ ನೀಡಿರುವ ಅವರು,ಲಸಿಕಗೆ ವಿತರಣೆ ಕುರಿತು ಮಾಹಿತಿ ಒದಗಿಸಿದ್ದಾರೆ.
ಬಹಳ ಕಡಿಮೆ ಅವಧಿಯಲ್ಲಿ ದೇಶವು ೧೯ ಲಸಿಕೆಗಳನ್ನು ಅಭಿವೃದ್ಧಿಪಡಿಸುವ ಮೂಲಕ ಅದ್ವಿತೀಯ ಸಾಧನೆ ಮಾಡಿದೆ. ಇದರಿಂದ ಮುಂದಿನ ಕೆಲವು ದಿನಗಳಲ್ಲಿ ದೇಶದ ಜನರಿಗೆ ಲಸಿಕೆಗಳನ್ನು ನೀಡಲು ಸಾಧ್ಯವಾಗಲಿದೆ ಎಂದರು.
ಕೋವಿಡ್ ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ ಮತ್ತು ಮುಂಚೂಣಿ ಸೇನಾನಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಜನವರಿ ೨ ರಂದು ೧೨೫ ಜಿಲ್ಲೆಗಳಲ್ಲಿ ಲಸಿಕೆ ತಾಲೀಮು ನಡೆಸಿದ್ದೇವೆ. ನಾವು ಈ ತಾಲೀಮು ಮೊದಲು ಮಾಡಿದ ಮೂರು ರಾಜ್ಯಗಳನ್ನು ಹೊರತುಪಡಿಸಿ ದೇಶಾದ್ಯಂತ ಕೈಗೊಳ್ಳುತ್ತಿರುವುದಾಗಿ ಹೇಳಿದರು.
ಕೋವಿಡ್ ಲಸಿಕೆಯನ್ನು ಸುಸೂತ್ರವಾಗಿ ವಿತರಿಸಲು ಆರೋಗ್ಯ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಎನ್‌ಜಿಒಗಳಿಗೆ ನೆರವಿನ ಹಸ್ತ ಚಾಚುವಂತೆ ಮನವಿ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಇದಕ್ಕೂ ಮುನ್ನ ಸಚಿವ ಹರ್ಷವರ್ಧನ್ ಅವರು ಚೆನ್ನೈನ ರಾಜೀವ್ ಗಾಂಧಿ ಆಸ್ಪತ್ರೆಗೆ ಭೇಟಿ ನೀಡಿ ಲಸಿಕಾ ತಾಲೀಮನ್ನು ಪರಿಶೀಲಿಸಿದರು.