ದೇಶವನ್ನು ಸಂವಿಧಾನ ಆಳಬೇಕೆ ಹೊರತು ಧರ್ಮವಲ್ಲ: ಜ್ಞಾನಪ್ರಕಾಶ ಸ್ವಾಮಿಜಿ

ಅಫಜಲಪುರ:ನ.18: ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತ ದೇಶ ಧರ್ಮ ನಿರಪೇಕ್ಷತೆಯನ್ನು ಹೊಂದಿದೆ. ಹೀಗಾಗಿ ದೇಶವನ್ನು ಧರ್ಮಗಳು ಆಳಬಾರದು, ಸಂವಿಧಾನ ಆಳಬೇಕು ಅಂದಾಗ ಮಾತ್ರ ಸರ್ವರು ಸಮಾನತೆಯಿಂದ ಬದುಕು ನಡೆಸಲು ಸಾಧ್ಯವಾಗಲಿದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮಿಜಿ ಅಭಿಪ್ರಾಯ ವ್ಯಕ್ತ ಪಡಿಸಿದರು.

ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು ದೇಶದಲ್ಲಿ ಎರಡು ಬಗೆಯ ಕಳ್ಳರಿದ್ದಾರೆ, ಜೇಬು ಕಳ್ಳರು, ರಾಜಕೀಯ ಕಳ್ಳರು. ಜೇಬು ಕಳ್ಳರು ಜೇಬು ಕದ್ದರೆ ರಾಜಕೀಯ ಕಳ್ಳರು ದೇಶದ ಸಂಪತ್ತನ್ನೆಲ್ಲ ಕದಿಯುತ್ತಿದ್ದಾರೆ. ನಮ್ಮ ಜನರಿಗೆ ಮತದಾನದ ಮಹತ್ವ ಗೊತ್ತಾಗುತ್ತಿಲ್ಲ. ಹೀಗಾಗಿ ಕಳ್ಳ ರಾಜಕಾರಣಿಗಳು ಹೆಚ್ಚಾಗಿದ್ದಾರೆ. ಎಲ್ಲರೂ ಬಾಬಾಸಾಹೇಬರನ್ನು ಸರಿಯಾಗಿ ಓದಿಕೊಳ್ಳಬೇಕು. ನಮ್ಮನ್ನಾಳುವ ಜನರನ್ನು ನಾವು ಸರಿಯಾಗಿ ಚುನಾಯಿಸಿದರೆ ಕಳ್ಳರ ಕಾಟ ಕಮ್ಮಿಯಾಗಿ ದೇಶ ಅಭಿವೃದ್ದಿ ಪಥದತ್ತ ಸಾಗಲು ಸಾಧ್ಯವಾಗಲಿದೆ ಎಂದರು.

ಶಾಸಕ ಪ್ರೀಯಾಂಕ್ ಖರ್ಗೆ ಮಾತನಾಡಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಯಾರು ಸರಿಯಾಗಿ ಓದಿಕೊಳ್ಳುತ್ತಿಲ್ಲ. ಅವರ ಲೇಖನಿಗಳು ಜನಸಾಮಾನ್ಯರು ಓದಿದರೆ ಒಳ್ಳೆಯದೆ ಅದಕ್ಕಿಂತ ಮೊದಲು ಚುನಾಯಿತರಾಗಿ ನಮ್ಮನ್ನಾಳುವ ಶಾಸಕರು, ಸಚಿವರು, ಸಂಸದರು ಓದಿದರೆ ಸಾಕು ದೇಶ ಉದ್ದಾರ ಆಗುತ್ತದೆ. ನಾವು ಬುದ್ದನ ಬೋಧನೆ ಕೇಳಲಿಲ್ಲ, ಬಸವನ ಮಾತು ಕೇಳಲಿಲ್ಲ, ಅಂಬೇಡ್ಕರ್ ಸಂವಿಧಾನದಂತೆಯೂ ನಡೆದುಕೊಳ್ಳುತ್ತಿಲ್ಲ ಹೀಗಾಗಿ ದೇಶ ಗುಲಾಮಗಿರಿಯಿಂದ ಹೊರ ಬರುತ್ತಿಲ್ಲ ಎಂದು ವಿಶಾದ ವ್ಯಕ್ತ ಪಡಿಸಿದರ ಅವರು ಇನ್ನೂ ಮುಂದಾದರೂ ಅಂಬೇಡ್ಕರ್ ಆಶಯಗಳಂತೆ ನಡೆದುಕೊಳ್ಳಬೇಕು, ಪ್ರಬುದ್ದ ಭಾರತ ನಿರ್ಮಾಣವಾಗಲು ಎಲ್ಲರೂ ಕೈ ಜೋಡಿಸಬೇಕು ಎಂದ ಅವರು ಜಗತ್ತಿನ ಯಾವ ಭಾಗದಲ್ಲೂ ಪ್ರಜಾಪ್ರಭುತ್ವ ಉಳಿದಿಲ್ಲ. ಎಲ್ಲಾ ಕಡೆ ಇಸ್ಲಾಮಿಕ್ ಸ್ಟೇಟ್, ಕಮ್ಯೂನಿಷ್ಟ ಸ್ಟೇಟ್ ಆಗುತ್ತಿವೆ. ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಯಾಗಿದೆ. ಆದರೆ ನಮ್ಮಲ್ಲಿನ ಕೆಲ ಮನುವಾದಿ ಶಕ್ತಿಗಳು ಪ್ರಜಾಪ್ರಭುತ್ವ ನಿರ್ಮೂಲನೆ ಮಾಡಲು ಹುನ್ನಾರ ನಡೆಸಿದ್ದಾರೆ. ಹೀಗಾಗಿ ಎಲ್ಲರೂ ಜಾಗೃತರಾಗದಿದ್ದರೆ ಮತ್ತೆ ಕರಾಳ ದಿನಗಳು ಸಮೀಪಿಸಲಿವೆ ಎಂದು ಎಚ್ಚರಿಕೆ ನೀಡಿದರು.