ದೇಶಮುಖ್ ಪ್ರಕರಣದ ವಿಚಾರಣೆ ನ್ಯಾಯಾಧೀಶರ ವರ್ಗಾವಣೆ

ಮುಂಬೈ.ನ೧೭: ಅಕ್ರಮ ಹಣ ವರ್ಗಾವಣೆ ಪ್ರಕರಣ ಸೇರಿದಂತೆ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ವಿವಿಧ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಧೀಶರಾದ ಎಚ್.ಎಸ್. ಸತ್‌ಭಾಯ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಯವತ್‌ಮಾಲ್ ಜಿಲ್ಲೆಗೆ ವರ್ಗಾಯಿಸಿ ಬಾಂಬೆ ಹೈಕೋರ್ಟ್ ಆದೇಶಿಸಿದೆ.
ಬಹುಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಅವರಿಗೆ ೧೪ ದಿನಗಳ ನ್ಯಾಯಾಂಗ ಬಂಧನದ ಆದೇಶವನ್ನು ಸತ್‌ಭಾಯ್ ಅವರು ಸೋಮವಾರ ಹೊರಡಿಸಿದ್ದರು.
ಅಲ್ಲದೆ ‘ಸದನ್’ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಸಚಿವ ಛಗನ್ ಭುಜಬಲ್ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿದ್ದರು. ಸಹಕಾರಿ ಬ್ಯಾಂಕ್‌ನಲ್ಲಿ ವಂಚನೆ ಆರೋಪದಡಿಯಲ್ಲಿ ಶಿವಸೇನೆಯ ಮಾಜಿ ಸಂಸದ ಆನಂದ್ ಅಡ್ಸುಲ್ ಅವರ ನಿರೀಕ್ಷಣಾ ಜಾಮೀನು ಅರ್ಜಿ, ಎನ್‌ಸಿಪಿ ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಏಕನಾಥ್ ಖಾಡ್ಸೆ ಅವರ ವಿರುದ್ಧದ ಪುಣೆ ಭೂ ವ್ಯವಹಾರ ಪ್ರಕರಣದ ವಿಚಾರಣೆಯನ್ನೂ ಅವರು ನಡೆಸುತ್ತಿದ್ದರು.