ದೇಶಭಕ್ತಿ ಹಿಂದೂಗಳ ಮೂಲ ಗುಣ:ಭಾಗವತ್


ನವದೆಹಲಿ,ಜ.೨- ದೇಶಭಕ್ತಿ ಎಂಬುದು ಹಿಂದೂಗಳ ಮೂಲ ಗುಣವಾಗಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಜೆಕೆ ಬಜಾಜ್ ಮತ್ತು ಎಂ.ಡಿ ಶ್ರೀನಿವಾಸ್ ಬರೆದಿರುವ ’ಮೇಕಿಂಗ್ ಎ ಹಿಂದೂ ಪ್ರೀಟಿಯಾಟ್: ಬ್ಯಾಗ್ರೌಂಡ್ ಆಫ್ ಗಾಂಧೀಜೀಸ್ ಹಿಂದ್ ಸ್ವರಾಜ್ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವ್ಯಕ್ತಿಯ ದೇಶಪ್ರೇಮ ಆತನ ಧರ್ಮದಿಂದ ಹುಟ್ಟಿಕೊಳ್ಳುತ್ತದೆ ಎಂದು ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ ಮಾತನ್ನು ಉಲ್ಲೇಖಿಸಿದ್ದಾರೆ. ಆರ್‌ಎಸ್‌ಎಸ್ ಗಾಂಧಿ ಅವರನ್ನು ತನ್ನವರೆಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿದೆ ಎಂಬ ವದಂತಿಗಳ ಬಗ್ಗೆ ಉತ್ತರಿಸಿದ ಅವರು, ಇದು ನಿಜವಲ್ಲ, ಅಂತಹ ಮಹಾನ್ ವ್ಯಕ್ತಿಗಳನ್ನು ಯಾರೂ ತಮ್ಮವರೆಂದು ಸೀಮಿತಗೊಳಿಸಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ತಮ್ಮ ದೃಷ್ಟಿಯಲ್ಲಿ ಧರ್ಮ ಮತ್ತು ದೇಶಪ್ರೇಮ ಬೇರೆಯಲ್ಲ. ತಾಯ್ನಾಡಿನ ಮೇಲಿನ ಪ್ರೀತಿ ಆಧ್ಯಾತ್ಮದಿಂದ ಹುಟ್ಟಿಕೊಂಡಿರುವುದನ್ನು ಗಾಂಧಿಜೀ ಅವರು ಹೇಳಿರುವುದನ್ನು ಭಾಗವತ್ ಉಲ್ಲೇಖಿಸಿದ್ದಾರೆ.
ಹಿಂದೂ ಎಂದಿಗೂ ಭಾರತ ವಿರೋಧಿಯಾಗಲು ಸಾಧ್ಯವಿಲ್ಲ. ಒಬ್ಬನು ದೇಶವನ್ನು ಪ್ರೀತಿಸುತ್ತಾನೆ ಎಂದಾದರೆ ಕೇವಲ ಭೂಮಿಯನ್ನು ಎಂದಷ್ಟೇ ಅಲ್ಲ. ಜನ, ನದಿಗಳು, ಸಂಸ್ಕೃತಿ ಎಲ್ಲವನ್ನೂ ಪ್ರೀತಿಸುತ್ತಾನೆ ಎಂದು ಹೇಳಿದ ಅವರು, ಹಿಂದುತ್ವ ಏಕತೆಯಲ್ಲಿ ನಂಬಿಕೆ ಇರಿಸಿಕೊಂಡಿದೆ ಎಂದಿದ್ದಾರೆ.