ದೇಶಭಕ್ತಿ ಶಾಶ್ವತವಾಗಿ ಉಲಿಸಿಕೊಳ್ಳುವ ಕಾರ್ಯಕ್ರಮಕ್ಕೆ ಬದ್ಧ-ಎಸ್.ಅಂಗಾರ

ಸ್ವಾತಂತ್ರ್ಯ ಕ್ರಾಂತಿಯ ನೆನಪಿಗಾಗಿ ಸುಳ್ಯದಿಂದ ಮಂಗಳೂರು ವರೆಗೆ ರಥಯಾತ್ರೆ
ಸುಳ್ಯ, ಎ.೬- ಸುಳ್ಯದ ಸ್ವಾತಂತ್ರ್ಯ ಪೂರ್ವದ ಐತಿಹಾಸಿಕ ದಾಖಲೆ, ನಮ್ಮ ಹಿರಿಯರ ಹೋರಾಟದ ಬಗ್ಗೆ ಯುವ ಜನನತೆಗೆ ತಿಳಿದಿಲ್ಲ. ದೇಶಭಕ್ತಿ ಶಾಶ್ವತವಾಗಿ ಉಳಿಸಿಕೊಳ್ಳುವ ಕಾರ್ಯಕ್ರಮಕ್ಕೆ ಬದ್ದವಾಗಿದೆ ಎಂದು ಬಂದರು ಮತ್ತು ಮೀನುಗಾರಿಗೆ ಸಚಿವ ಎಸ್.ಅಂಗಾರ ಹೇಳಿದರು.
೧೮೩೭ ನೇ ಇಸವಿ ಮಾರ್ಚ್ ಕೊನೆಯಲ್ಲಿ ಬ್ರಿಟಿಷರ ವಿರುದ್ಧ ದಂಗೆ ಎದ್ದು ಸುಳ್ಯದಿಂದ ಮಂಗಳೂರು ವರೆಗೆ ಹೋದ ರೈತ ಹೋರಾಟಗಾರರು ಎಪ್ರಿಲ್ ೫ ರಂದು ಮಂಗಳೂರು ತಲುಪಿ ಅಲ್ಲಿದ್ದ ಬ್ರಿಟಿಷರನ್ನು ಓಡಿಸಿ ಅವರ ಧ್ವಜ ಕೆಳಗಿಳಿಸಿ ತಮ್ಮ ಧ್ವಜ ಹಾರಿಸಿದ ನೆನಪಿಗಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಸುಳ್ಯದಿಂದ ಮಂಗಳೂರಿಗೆ ಆಯೋಜಿಸಿದ ರಥಯಾತ್ರೆ ಗೆ ಸುಳ್ಯದ ಚೆನ್ನಕೇಶವ ದೇವಸ್ಥಾನದ ಎದುರು ಸೋಮವಾರ ಚಾಲನೆ ನೀಡಿ ಮಾತನಾಡಿದರು ಸುಳ್ಯದ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ವಿರುದ್ದ ಹೋರಾಟ ನಡೆಸಿದ್ದು ಸುಳ್ಯದ ಹೆಮ್ಮೆ. ಇದರ ನೆನಪಿಗಾಪಿ ಬೆಳ್ಳಾರೆಯಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ತುಳು ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಮಾತನಾಡಿ ೧೮೩೭ ರ ಅಮರ ಕ್ರಾಂತಿ ಸ್ವಾತಂತ್ರ್ಯ ಸಮರದ ನೆನಪಿಗಾಗಿ ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತಿಯನ್ನು ಉದ್ದೀಪಿಸುವ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದಕ್ಕೆ ಅಕಾಡೆಮಿಗೆ ಹೆಮ್ಮೆಯಾಗುತ್ತದೆ ಎಂದವರು ಹೇಳಿದರು.
ಸಮಾರಂಭದಲ್ಲಿ ತುಳುನಾಡು ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಸುಳ್ಯ ನಗರ ಪಂಚಾಯಿತಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಚೆನ್ನಕೇಶವ ದೇವಸ್ಥಾನ ಅನುವಂಶಿಕ ಆಡಳಿತ ಮೊಕ್ತೆಸರ ಡಾ. ಹರಪ್ರಸಾದ್ ತುದಿಯಡ್ಕ ನ.ಪಂ.ಉಪಾಧ್ಕಕ್ಷರು, ಸದಸ್ಯರು ಮತ್ತು ಇತರರು ಈ ಸಂದರ್ಭ ಉಪಸ್ಥಿತರಿದ್ದರು.