ವಿಜಯಪುರ:ಎ.4: ದೇಶಭಕ್ತಿ ಎನ್ನುವುದನ್ನು ಬಿತ್ತುತ್ತೇನೆ ಎನ್ನುವುದು ಮುರ್ಖತನವಾಗುತ್ತದೆ. ಪ್ರತಿಯೊಬ್ಬ ಭಾರತೀಯನ ಎದೆಯಲ್ಲಿ ದೇಶಭಕ್ತಿ ಇದ್ದೇ ಇರುತ್ತದೆ. ಅದನ್ನು ಜಾಗೃತಿಗೊಳಿಸುವ ಕಾರ್ಯ ಮಾಡಬೇಕಿದೆ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವುದಕ್ಕಾಗಿ ತಮ್ಮ ಪ್ರಾಣವನ್ನು ಬಲಿಕೊಟ್ಟ ದೇಶಭಕ್ತರನ್ನು ಸ್ಮರಿಸುವಂತಹ ಇಂಥ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಯುವಕರಲ್ಲಿ ನಮ್ಮ ದೇಶದ ಬಗ್ಗೆ ಮತ್ತಷ್ಟು ಅಭಿಮಾನ ಹಾಗೂ ಹೆಮ್ಮೆಯನ್ನು ಹೆಚ್ಚಿಸುವ ಕಾರ್ಯ ಮಾಡಿ ಮಸುಕಾಗಿ ದೇಶಭಕ್ತಿಯ ಬೆಳಕು ಜಗಮಗಿಸುವಂತೆ ಮಾಡಬೇಕು ಎಂದು ಮಂಜುನಾಥ ಮ. ಜುನಗೊಂಡ ಹೇಳಿದರು.
ನಗರದ ಹುತಾತ್ಮ ಚೌಕ್‍ನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಗರ ಘಟಕದ ವತಿಯಿಂದ ಬಲಿದಾನ ದಿವಸದ ಅಂಗವಾಗಿ ಆಯೋಜಿಸಲಾಗಿದ್ದ ಉಘೇ ವೀರಭೂಮಿ ಕಾರ್ಯಕ್ರಮಕ್ಕೆ ವಕ್ತಾರರಾಗಿ ಆಗಮಿಸಿ ಮಾತನಾಡಿದ ಅವರು; ಸ್ವಾತಂತ್ರ್ಯ ಗಂಗೆಯ ಒಡಲಿಗೆ ಧುಮುಕಿದ ಸಾವಿರಾರು ಜನ ಕ್ರಾಂತಿಕಾರಿಗಳು ತಮ್ಮ ಪ್ರಾಣವನ್ನು ಅರ್ಪಿಸುವ ಮೂಲಕ ಭಾರತ ಮಾತೆಯ ಋಣವನ್ನು ತೀರಿಸಿದ್ದಾರೆ. ಅದರಲ್ಲೂ ಭಗತ್ ಸಿಂಗ್, ರಾಜಗುರು, ಸುಖದೇವರಂತ ಕ್ರಾಂತಿಯ ಕಿಡಿಗಳು ಇಡೀ ಬ್ರಿಟೀಷ್ ಸರ್ಕಾರಕ್ಕೆ ಸಿಂಹ ಸ್ವಪ್ನವಾಗಿ ಕಾಡುವ ಮೂಲಕ ಕ್ರಾಂತಿ ಚಿರವಾಗಿರಲಿ ಎನ್ನುವ ತತ್ವವನ್ನು ಎತ್ತಿ ಹಿಡಿದರು. ಹೆಜ್ಜೆ ಹೆಜ್ಜೆಗೂ ಬ್ರಿಟೀಷ್ ಸಾಮ್ರಾಜ್ಯಕ್ಕೆ ಮಗ್ಗಲು ಮುಳ್ಳಾಗಿ ಕಾಡಿದ್ದಾರೆ. ಶರಣರಿಗೆ ಮರಣವೇ ಮಹಾನವಮಿ ಎನ್ನುವ ಮಾತಿಗೆ ಸಮನಾಗಿ ಕ್ರಾಂತಿಕಾರಿಗಳು ಸಾವೇ ಸಮಾರಂಭ ಎನ್ನುವಂತೆ ಇಪ್ಪತ್ಮೂರನೇ ವಯಸ್ಸಿನಲ್ಲಿಯೇ ನಗು ನಗುತ ಉರುಳನ್ನು ಕೊರಳಿಗೆ ಹಾಕಿಕೊಂಡು ಹುತಾತ್ಮರಾದರು. ಆ ಮೂಲಕ ದೇಹದಿಂದ ದೂರವಾಗಿ ಆಲೋಚನೆಗಳಿಂದ ನಮ್ಮಾತ್ಮದಲ್ಲಿ ಉಳಿದಿದ್ದಾರೆ ಎಂದು ಹೇಳಿದರು. ವ್ಯಕ್ತಿಗಳಿಗೆ ಸಾವಿದೆ ಹೊರತು ವ್ಯಕ್ತಿಯ ಆಲೋಚನೆಗಳಿಗೆ ಸಾವಿಲ್ಲ ಎನ್ನುವ ಭಗತ್ ಸಿಂಗ್ ಮಾತಿನಂತೆ ಇಂದು ಈ ತ್ರಿರತ್ನಗಳು ತಮ್ಮ ಕ್ರಾಂತಿಕಾರಕ ವಿಚಾರಗಳಿಂದ ಯುವಕರ ಕಣ್ಮಣಿಯಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ರಾಜು ಬಿಜ್ಜರಗಿ ಅವರು; ಶಾಲೆಗಳಲ್ಲಿ ಮಕ್ಕಳಿಗೆ ದೇಶಭಕ್ತರ ಪಾಠವನ್ನು ಬೋಧಿಸಲಾಗುತ್ತದೆ. ಆದರೆ ಅದು ಕೇವಲ ಪಠ್ಯಕಷ್ಟೇ ಸೀಮಿತವಾದರೆ ದೇಶಭಕ್ತಿ ಜಾಗೃತಗೊಳ್ಳುವುದಕ್ಕೆ ಸಾಧ್ಯವಿಲ್ಲ. ಈ ದೇಶಕ್ಕಾಗಿ ಮಡಿದ ಪ್ರತಿಯೊಬ್ಬರ ವಿಚಾರಗಳನ್ನು ಯುವಕರ ಎದೆಯಲ್ಲಿ ಅಚ್ಚೆ ಹಾಕಿಸಿದಾಗ ಮಾತ್ರ ನಮ್ಮ ದೇಶದ ಮೇಲಿರುವ ಅಭಿಮಾನ ನೂರ್ಮಡಿಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಇಂಥ ಕಾರ್ಯಕ್ರಮಗಳು ಅತ್ಯಂತ ಅವಶ್ಯಕವಾಗಿವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಬಿವಿಪಿ ಜಿಲ್ಲಾ ಸಹ ಪ್ರಮುಖರಾದ ಅಮಿತ ಬಿರಾದಾರ; ಭಾರತದ ಅತೀ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿ ಗುರುತಿಸಿಕೊಂಡಿರುವ ಅಖಿಲ ಭಾರಥೀಯ ವಿದ್ಯಾರ್ಥಿ ಪರಿಷತ್À ಕಾರ್ಯ ಮಾಡುತ್ತಿರುವುದು ನಿಜಕ್ಕೂ ಅದ್ಭುತವಾದ ಕಾರ್ಯ ಎಂದು ಬಣ್ಣಿಸಿದರು.
ಎಬಿವಿಪಿ ನಗರ ಅಧ್ಯಕ್ಷರಾದ ಎಸ್.ಜಿ.ಮಠ ಮಾತನಾಡಿ; ಇತಿಹಾಸ ಮುಚ್ಚಿಟ್ಟಿರುವ ಎಷ್ಟೋ ಸತ್ಯಗಳು ಇಂದು ನಮ್ಮ ಮಕ್ಕಳಿಗೆ ತಿಳಿಯದೇ ಉಳಿಯುತ್ತಿದೆ. ಆ ನಿಟ್ಟಿನಲ್ಲಿ ಮುಚ್ಚಿಟ್ಟಿರುವ ಸತ್ಯವನ್ನು ಯುವಕರ ಎದುರಿಗೆ ಬಿಚ್ಚಿಟ್ಟು ನಮ್ಮ ದೇಶ ಅದೆಷ್ಟು ಅದ್ಭುತ ಎನ್ನುವುದನ್ನು ತಿಳಿಸಿಕೊಡುವ ಕಾರ್ಯಕ್ಕೆ ಈ ಸಂಘಟನೆ ತೆರೆದುಕೊಂಡಿದೆ. ಇಂಥಹ ದೇಶಭಕ್ತಿ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಆಯೋಜನೆ ಮಾಡುತ್ತ ಜನ ಮಾನಸದಲ್ಲಿ ದೇಶಭಕ್ತಿಯ ಕಾಂತಿ ಹೊಮ್ಮುವಂತೆ ಮಾಡಲಾಗುವುದು ಎಂದು ಹೇಳಿದರು.
ಎಬಿವಿಪಿ ರಾಜ್ಯ ಉಪಾಧ್ಯಕ್ಷ ವಿನಾಯಕ್ ಸಿಂಗ್ ರಜಪೂತ,ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಪೃಥ್ವಿಕುಮಾರ, ವಿಭಾಗ ಸಂಘಟನಾ ಕಾರ್ಯದರ್ಶಿ ಗಂಗಧರ ಹಂಜಗಿ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶ್ರೀ ನಾಗರಾಜ ಬಟಗೇರಾ ಸೇರಿದಂತೆ ಸಂಘಟನೆಯ ಪ್ರಮುಖರು ಉಪಸ್ಥಿತರಿದ್ದರು. ಸಾಕ್ಷಿ ಹಿರೇಮಠ ಪ್ರಾರ್ಥಿಸಿದರು. ಸುರೇಖಾ ಕುಲಕರ್ಣಿ ಸ್ವಾಗತಿಸಿದರು. ಮಂಜುನಾಥ ಹಳ್ಳಿ ನಿರೂಪಿಸಿದರು.