ದೇಶಭಕ್ತಿ, ಗುರುಭಕ್ತಿಯಿಂದ ಪರಿಪೂರ್ಣ ವ್ಯಕ್ತಿತ್ವ: ಕಣ್ವಕುಪ್ಪೆ ಶ್ರೀ

ಜಗಳೂರು.ಆ.೪: ತಾನು ಹುಟ್ಟಿದ ನೆಲಕ್ಕೆ , ಜನ್ಮ ಕೊಟ್ಟ ತಂದೆ ತಾಯಿಗೆ ಪ್ರತಿಯೊಬ್ಬ ವ್ಯಕ್ತಿ ಋಣಿಯಾಗಿರಬೇಕು ಎಂದು ತಾಲ್ಲೂಕಿನ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ಉದ್ದಗಟ್ಟ ಗ್ರಾಮದಲ್ಲಿ  ನಡೆದ ಗಲ್ಲೆ ದುರುಗಮ್ಮ ದೇವಸ್ಥಾನದ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿಕೊಂಡು ಅವರು ಮಾತನಾಡಿದರು.ದೈವಭಕ್ತಿ, ಗುರುಭಕ್ತಿ,  ದೇಶಭಕ್ತಿಯನ್ನು ಮೈಗೂಡಿಸಿಕೊಂಡಾಗ ಮಾತ್ರ  ಎಲ್ಲರೂ ಪರಿಪೂರ್ಣ ವ್ಯಕ್ತಿಗಳಾಗಲು ಸಾಧ್ಯವಾಗುತ್ತದೆ. ಈ ನೆಲದಲ್ಲೇ ಹುಟ್ಟಿ ಬೆಳೆದು ಶಿಕ್ಷಣ ಸವಲತ್ತು ಹೊಂದಿ ವಿದೇಶಗಳಿಗೆ ಹಾರಿ ಹೋದವರಿಗೆ ಕಳೆದ ಕೋವಿಡ್ ಕಾಲಘಟ್ಟ ತಕ್ಕ ಪಾಠ ಕಲಿಸಿದೆ. ಜಗತ್ತಿನೆಲ್ಲೆಡೆ ಕೋವಿಡ್ ಸೋಂಕು ಹರಡಿದಾಗ ಜೀವಭಯದಿಂದ ಸ್ವದೇಶಕ್ಕೆ ಓಡೋಡಿ ಬರಬೇಕಾಯಿತು. ಕಷ್ಟ ಕಾಲದಲ್ಲಿ ತಾಯ್ನೆಲ ನೆನೆಯುವುದಲ್ಲ. ಪ್ರತಿಯೊಬ್ಬರ ಎದೆಯಾಳದಲ್ಲಿ ದೇಶಾಭಿಮಾನ ಇರಬೇಕು ಎಂದು ಹೇಳಿದರು.ಉದ್ದಗಟ್ಟದಂತ ಸಣ್ಣ ಗ್ರಾಮದಲ್ಲಿ ಹುಟ್ಟಿ ಬೆಳೆದ ಉದ್ಯಮಿ ಕಿತ್ತೂರು ಜಯಣ್ಣ ಅವರು ಗ್ರಾಮದಲ್ಲಿ ತಮ್ಮ ಸ್ವಂತ ಹಣದಲ್ಲಿ ದುರುಗಮ್ಮ ಹಾಗೂ ಬಸವೇಶ್ವರ ದೇವಸ್ಥಾನಗಳನ್ನು ಕಟ್ಟಿಕೊಟ್ಟು ಗ್ರಾಮಸ್ಥರ ಹಲವು ರೀತಿಯ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವುದು ಮಾದರಿಯಾಗಿದೆ. ಸಂಕಷ್ಟಗಳಿಗೆ ಸ್ಪಂದಿಸುವ ಇಂತಹ  ವ್ಯಕ್ತಿಗಳು ಹೆಚ್ಚಲಿ  ಎಂದು ಸ್ವಾಮೀಜಿ ಮೆಚ್ಚುಗೆ ವ್ತಕಪಡಿಸಿದರು.ಮಾಜಿ ಶಾಸಕ ಎಚ್.ಪಿ. ರಾಜೇಶ್ ಮಾತನಾಡಿ, ದಲಿತ ಸಮುದಾಯದವರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಶೋಷಿತ ಸಮುದಾಯದಲ್ಲಿ ವಕೀಲರು, ಶಿಕ್ಷಕರು, ವೈದ್ಯರು ರೂಪುಗೊಳ್ಳಬೇಕು. ಉದ್ಯಮಿ ಕಿತ್ತೂರು ಜಯಣ್ಣ ಅವರು, ಗ್ರಾಮದ ಅಲಕ್ಷಿತ ಶೋಷಿತ ಸಮಾಜದ ಏಳ್ಗೆಗಾಗಿ ಮಾತೃ ಹೃದಯದಿಂದ ಸ್ಪಂದಿಸುತ್ತಿದ್ದಾರೆ ಎಂದರು.