ಬೀದರ್:ಜೂ.27: ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಹಾಗೂ ಪರಿಶ್ರಮ ಹುಟ್ಟು ಹಾಕಲು ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಸಹಕಾರಿಯಾಗಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ.ಪರಮೇಶ್ವರ ನಾಯಕ್ ಅಭಿಪ್ರಾಯ ಪಟ್ಟರು.
ಸೋಮವಾರ ತಾಲೂಕಿನ ಫತ್ತೆಪುರ ಗ್ರಾಮದಲ್ಲಿ ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಅಡಿಯಲ್ಲಿನ ಕರ್ನಾಟಕ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್ ಘಟಕದಿಂದ ಜರುಗಿದ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳು ಅಗತ್ಯ. ಇವೆಲ್ಲದಕ್ಕೆ ಎನ್.ಎಸ್.ಎಸ್ ಶಿಬಿರ ಸ್ಪೂರ್ತಿ ನೀಡಬಲ್ಲದು. ಮನೆಯಲ್ಲಿ ಕಸ ಗೂಡಿಸಲೂ ಹಿಂದೇಟು ಹಾಕುವ ವಿದ್ಯಾರ್ಥಿಗಳಿಗೆ ಸಾಮಾಜಿಕ ಪ್ರಜ್ಞೆ ಶುನ್ಯವಾಗುತ್ತದೆ. ಸೋಮಾರಿತನ, ಆಲಸ್ಯತನಕ್ಕೆ ಜೋತು ಬಿದ್ದು, ಪರಾವಲಂಬಿ ಬದುಕು ಕಟ್ಟಿಕೊಳ್ಳುವ ವಿದ್ಯಾರ್ಥಿಗಳಿಗೆ ಎನ್.ಎಸ್.ಎಸ್ ಮೂಲಕ ಸಾಮಾಜಿಕ ಕಳಕಳಿ ಜಾಗೃತವಾಗಿ ಈ ದೇಶದ ಜವಾಬ್ದಾರಿ ಪ್ರಜೆಯಾಗಲು ಸಾಧ್ಯವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕೆ.ಆರ್.ಇ ಸಂಸ್ಥೆ ಜಂಟಿ ಕಾರ್ಯದರ್ಶಿ ಸತೀಶ ಪಾಟೀಲ ಮಾತನಾಡಿ, ರಾಷ್ಟ್ರೀಯ ಸೇವಾ ಯೋಜನೆಯಿಂದ ವಿದ್ಯಾರ್ಥಿಗಳಲ್ಲಿ ಅಭಿವೃದ್ಧಿಯ ಮನೋಭಾವ ಜಾಗೇಋತವಾಗುವುದಲ್ಲದೇ ನಾಯಕತ್ವ ಗುಣ ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ. ಎನ್.ಎಸ್.ಎಸ್ ಮೂಲಕ ವಿದ್ಯಾರ್ಥಿಗಳು ಗ್ರಾಮಾಭಿವೃದ್ಧಿಯ ಪರಿಕಲ್ಪನೆ ಬೆಳೆಸಿಕೊಳ್ಲಲು ಸಹಾಯವಾಗುತ್ತದೆ. ಅಲ್ಲದೇ ರಾಜಕೀಯ ಇಚ್ಛಾಶಕ್ತಿ ಜಾಗೃತವಾಗಲು ಇದರಿಂದ ಪ್ರೇರಣೆ ದೊರೆಯುತ್ತದೆ ಎಂದರು.
ಕರ್ನಾಟಕ ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನ್ ಹಂಗರಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಪಠ್ಯೇತರ ಚಟುವಟಿಕೆಗಳು ಉದಯಿಸಲು ಎನ್.ಸಿ.ಸಿ ಹಾಗೂ ಎನ್.ಎಸ್.ಎಸ್ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್ ಪೂರಕವಾಗುತ್ತವೆ. ಇವು ಶೈಕ್ಷಣಿಕ ಗುಣಮಟ್ಟವನ್ನು ಸಹ ಸುಧಾರಿಸಲು ಹಾಗೂ ಪ್ರತಿಭೆಗಳಾಗಿ ಪರಿವರ್ತನೆಯಾಗಲು ಪ್ರೋತ್ಸಾಹಿಸುತ್ತವೆ ಎಂದರು. ಕೆ.ಆರ್.ಇ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ ಅಧ್ಯಕ್ಷತೆ ವಹಿಸಿದರು.
ಆರಂಭದಲ್ಲಿ ಎನ್.ಎಸ್.ಎಸ್ ಅಧಿಕಾರಿ ಪ್ರೊ.ಸೋಮನಾಥ ಬಿರಾದಾರ ಸ್ವಾಗತಿಸಿದರು. ಡಾ.ದಿಲೀಪ ಮಾಲೆ ಕಾರ್ಯಕ್ರಮ ನಿರೂಪಿಸಿದರು. ಉಪ ಪ್ರಾಚಾರ್ಯ ಪ್ರೊ.ಅನಿಲ ಚಿಕಮಣ್ಣೂರ್ ವಂದಿಸಿದರು.
ಕಾಲೇಜಿನ ಪ್ರಾಧ್ಯಾಪಕರಾದ ಡಾ.ರಾಜೇಂದ್ರ ಬಿರಾದಾರ, ಪ್ರೊ.ಬಿ.ಎಮ್ ಕೊಡಂಬಲ್, ಡಾ.ಮಾದಯ್ಯ ಸ್ವಾಮಿ, ಡಾ.ಸೋಮನಾಥ ಮುದ್ದಾ ಸೇರಿದಂತೆ ಕಾಲೇಜಿನ ಇತರೆ ಪ್ರಾಧ್ಯಾಪಕರು, ಎನ್.ಎಸ್.ಎಸ್ ಶಿಬಿರಾರ್ಥಿಗಳು ಹಾಗೂ ಸ್ಥಳಿಯ ಗ್ರಾಮಸ್ಥರು ಕಾರ್ಯಕ್ರಮದಲ್ಲಿದ್ದರು.