ದೇಶದ ಹಲವೆಡೆ ಭಾರೀ ಮಳೆ ನಿರೀಕ್ಷೆ

ನವದೆಹಲಿ, ಜು.೨೧- ರಾಷ್ಟ್ರದ ಎಲ್ಲೆಡೆ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಮಹಾರಾಷ್ಟ್ರ, ಉತ್ತರಾಖಂಡ, ಹಿಮಾಚಲ, ಗುಜರಾತ್, ಛತ್ತೀಸ್‌ಗಢ, ತೆಲಂಗಾಣ ಮತ್ತು ಒಡಿಶಾ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಈ ಕುರಿತು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದ್ದು, ಇಂದು ಉತ್ತರಾಖಂಡಕ್ಕೆ ಆರೆಂಜ್ ಅಲರ್ಟ್ ಮತ್ತು ಶನಿವಾರ ಹಳದಿ ಅಲರ್ಟ್ ನೀಡಿದೆ. ಜೊತೆಗೆ ಹಿಮಾಚಲ ಪ್ರದೇಶದಲ್ಲಿ ಜುಲೈ ೨೨ ರವರೆಗೆ ಅಲರ್ಟ್ ಘೋಷಿಸಿರುವುದರಿಂದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ಮಹಾರಾಷ್ಟ್ರ ಮಳೆಯ ಅರ್ಭಟ ಜೋರಾಗಿದೆ. ಪುಣೆ, ರಾಯಗಡ, ಪಾಲ್ಘರ್ ಮತ್ತು ಥಾಣೆ ಜಿಲ್ಲೆಗಳು ಸೇರಿದಂತೆ ಮಹಾರಾಷ್ಟ್ರದ ನಾಲ್ಕು ಜಿಲ್ಲೆಗಳಿಗೆ ಐಎಂಡಿ ಶುಕ್ರವಾರ ರೆಡ್ ಅಲರ್ಟ್ ಘೋಷಿಸಿದೆ. ಮುಂಬೈನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ನಗರದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ.
ರಾಜ್ಯದ ಕೆಲವು ಭಾಗಗಳಲ್ಲಿ ಜುಲೈ ೨೬ರವರೆಗೆ ಮಳೆಯಾಗಬಹುದು ಎಂದು ಐಎಂಡಿ ಹೇಳಿದೆ. ಮುಂಬೈ ಶನಿವಾರದವರೆಗೆ ಪ್ರತ್ಯೇಕ ಪ್ರದೇಶಗಳಲ್ಲಿ ಭಾರಿ ಮಳೆಯನ್ನು ಪಡೆಯುತ್ತದೆ. ತುಲನಾತ್ಮಕವಾಗಿ ಹಗುರವಾದ ಮಳೆಯೊಂದಿಗೆ ಪರಿಸ್ಥಿತಿ ಸುಧಾರಿಸಬಹುದು ಎಂದಿದ್ದಾರೆ.
ಹಾಗೇ, ಜುಲೈ ೨೨ ರವರೆಗೆ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಹೆಚ್ಚು ಮಳೆಯ ಎಚ್ಚರಿಕೆಯನ್ನು ನೀಡಿದೆ.
ದಕ್ಷಿಣ ಪ್ರದೇಶದಲ್ಲಿ, ಕೇರಳ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಜುಲೈ ೨೨ ರವರೆಗೆ ಅಧಿಕ ಮಳೆಯಾಗಬಹುದು ಎನ್ನಲಾಗಿದೆ. ಮಾತ್ರವಲ್ಲದೆ ಹವಾಮಾನ ಇಲಾಖೆಯು ಕೇರಳದ ಕೆಲವು ಜಿಲ್ಲೆಗಳಿಗೆ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಆರೆಂಜ್ ಎಚ್ಚರಿಕೆಗಳನ್ನು ನೀಡಿದೆ.