ದೇಶದ ಹತ್ತನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ ಕೆ.ಆರ್.ನಾರಾಯಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.04: 1945 ರಲ್ಲಿ ದೆಹಲಿಯಲ್ಲಿ ಹಿಂದೂ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಸೇವೆ ಮಾಡುತ್ತಾ ತನ್ನ ಜ್ಞಾನದ ಬಲದಿಂದ ಹಿರಿಯರ ಮೆಚ್ಚುಗೆ ಗಳಿಸಿ,ಅವರ ಸಹಾಯದಿಂದ  ಸ್ವತಂತ್ರ ಭಾರತದ ಮೊದಲ ಪ್ರಧಾನ ಮಂತ್ರಿಯಾದ ನೆಹರು ಅವರನ್ನು ಭೇಟಿಯಾಗಿ ಅವರ ಮನಗೆದ್ದು ವಿದೇಶಾಂಗ ಸೇವೆಯ ಸದಸ್ಯರಾಗಿ ಜಪಾನ್, ಇಂಗ್ಲೆಂಡ್, ಅಮೇರಿಕಾ, ಥಾಯ್ಲೆಂಡ್, ಟರ್ಕಿ ಹಾಗೂ ಚೀನಾ ದೇಶಗಳ ರಾಯಭಾರಿಯಾಗಿ ಸೇವೆಮಾಡಿ 1997 ರಿಂದ 2002ರ ವರೆಗೆ ಭಾರತ ದೇಶದ ಹತ್ತನೇ ರಾಷ್ಟ್ರಪತಿ ಉತ್ತಮ ಸೇವೆ ಸಲ್ಲಿಸಿದವರು ಕೆ.ಆರ್. ನಾರಾಯಣ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಚೇಳ್ಳಗುರ್ಕಿ ಹೇಳಿದರು.
ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ನಾರಾಯಣ್ ಅವರ ನೆನಪು ಹಾಗೂ ಉತ್ತಮ ವ್ಯಕ್ತಿತ್ವವುಳ್ಳ ಮಕ್ಕಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಬಹುಮಾನ ವಿತರಿಸಿ ಮಾತನಾಡಿದ ಅವರು ನಾರಾಯಣ್ ಅವರು ಮೂರು ಬಾರಿ ಲೋಕಸಭಾ ಸದಸ್ಯರಾಗಿ 1992 ರಿಂದ 1997 ರವರೆಗೆ ಉಪರಾಷ್ಟ್ರಪತಿಯಾಗಿ ಸೇವೆ ಮಾಡುತ್ತಾ ಸಂವಿಧಾನದ ನಾಲ್ಕು ಗೋಡೆಗಳ ಮಧ್ಯೆ ಆಡಳಿತ ಮಾಡಿ ಜನಸಾಮಾನ್ಯರ ರಾಷ್ಟ್ರಪತಿಯಾಗಿದ್ದರು.ಅವರ ಅವಧಿಯಲ್ಲಿ ಬಾನುಲಿ ಕೇಂದ್ರವನ್ನು ಸಮರ್ಪಕವಾಗಿ ಬಳಸಿಕೊಂಡು, ಪ್ರತಿದಿನ ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಒಂದೊಂದು ಸಂದೇಶ ನೀಡುತ್ತಿದ್ದರು.
ಆದ್ದರಿಂದ ವಿದ್ಯಾರ್ಥಿಗಳು ಪಠ್ಯ ಪುಸ್ತಕಕ್ಕೆ ಸಂಬಂಧ ಪಟ್ಟಂತೆ ಹೆಚ್ಚಿನ  ಮಾಹಿತಿ ಸಂಗ್ರಹಿಸಲು ಸಮೂಹ ಮಾಧ್ಯಮಗಳನ್ನು ಬಳಸಿಕೊಳ್ಳಬೇಕು. ಆದರೆ ಅದು ದುರ್ಬಳಕೆ ಆಗಬಾರದು ಎಂದು ಹೇಳಿದರು.
ಶಿಕ್ಷಕರಾದ ಸುಮತಿ ಪೂಜೆ ನೆರವೇರಿಸಿದರು.
ಶಿಕ್ಷಕರಾದ ಬಸವರಾಜ, ಮೋದಿನ್ ಸಾಬ್, ಚನ್ನಮ್ಮ, ಸುಧಾ, ವೈಶಾಲಿ, ಶ್ವೇತಾ, ಉಮ್ಮೆಹಾನಿ,ಶಶಮ್ಮ, ವಿದ್ಯಾರ್ಥಿ ಪ್ರತಿನಿಧಿ ಮಹೇಶ ಮುಂತಾದವರು ಉಪಸ್ಥಿತರಿದ್ದರು.