ದೇಶದ ಸ್ವಾತಂತ್ರ್ಯದ ಕ್ರಾಂತಿಜ್ಯೋತಿ ಹೊತ್ತಿಸಿದ ವಾಸುದೇವ ಫಡ್ಕೆ

ಕಲಬುರಗಿ,ನ.4: ಭಾರತದ ಸ್ವಾತಂತ್ರ್ಯಕ್ಕೆ ಅನೇಕ ಮಹನೀಯರು ಹೋರಾಟ ಮಾಡಿದ್ದಾರೆ. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ವಾಸುದೇವ ಬಲವಂತ ಫಡ್ಕೆ ಹೆಸರು ಪ್ರಮುಖವಾಗಿ ಕೇಳಿಬರುತ್ತದೆ. ಅತ್ಯಂತ ಶೂರ, ದೇಶಭಕ್ತನಾಗಿ ಬ್ರಿಟಿಷರ ವಿರುದ್ಧ ನಿರಂತರವಾಗಿ ಕೆಚ್ಚೆದೆಯ ಹೋರಾಟ ಮಾಡಿ, ನಮ್ಮ ದೇಶದ ಸ್ವಾತಂತ್ರ್ಯವನ್ನು ದೊರಕಿಸಿಕೊಡುವಲ್ಲಿ ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆಂದು ಎಂದು ಚಿಂತಕ, ಸಮಾಜ ಸೇವಕ ಶ್ರೀಶೈಲ್ ಮುಲಗೆ ಹೇಳಿದರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿಯ ದಕ್ಷಿಣಮುಖಿ ಹನುಮಾನ ದೇವಸ್ಥಾನದ ಆವರಣದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ ಮತ್ತು ‘ದಕ್ಷಿಣಮುಖಿ ಹನುಮಾನ ದೇವಸ್ಥಾನ ಸಮಿತಿ’ ವತಿಯಿಂದ ಶುಕ್ರÀವಾರ ಜರುಗಿದ ‘ವಾಸುದೇವ ಬಲವಂತ ಫಡ್ಕೆ ಅವರ 177ನೇ ಜನ್ಮ ದಿನಾಚರಣೆ’ಯ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಫಡ್ಕೆ ಅವರಿಗೆ ಕಲಬುರಗಿ ಜಿಲ್ಲೆಯ ನಂಟಿದೆ. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಬ್ರಿಟಿಷರ ಬಂಧನದ ಸಂಭವವನ್ನು ಅರಿತು ಜಿಲ್ಲೆಯ ಪ್ರಮುಖ ಸುಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದ ಎದುರುಗಡೆಯಿರುವ ಆಲದ ಮರದ ಕೆಳಗೆ ವೇಷ ಮರಿಸಿಕೊಂಡು ಸ್ವಾಮಿಯ ವೇಷ ಧರಿಸಿ, ದೇವಸ್ಥಾನಕ್ಕೆ ಆಗಮಿಸುತ್ತಿದ್ದ ಜನರಿಗೆ ಸ್ವಾತಂತ್ರ್ಯದ ಕಿಚ್ಚನ್ನು ಹಚ್ಚಿಸುತ್ತಿದ್ದರು. ಸುಮಾರು ಒಂದು ವರ್ಷದ ಕಾಲ ಇಲ್ಲಿಯೇ ಇದ್ದರು. ನಂತರ ಬ್ರಿಟಿಷರು ಇಲ್ಲಗೆ ಕೂಡಾ ಆಗಮಿಸಿದ್ದು, ಶೋಧನೆ ನಡೆಸಿರುವ ವಿಷಯ ಅರಿತು ಭೀಮಾ ನದಿಯನ್ನು ಈಜಿ ದೇವರನಾವದಗಿ ಗ್ರಾಮಕ್ಕೆ ತಲುಪಿದರು. ದೇಶದ್ರೋಹಿ ವ್ಯಕ್ತಿ ಒಬ್ಬ ಇವರ ಸ್ಥಳದ ಬಗ್ಗೆ ಬ್ರಿಟಿಷರಿಗೆ ಮಾಹಿತಿ ನೀಡಿದಾಗ, ಬ್ರಿಟಿಷರು ಫಡ್ಕೆ ಅವರನ್ನು ಬಂಧಿಸಿದರು ಎಂದು ವಿವರಿಸಿದರು.
ಉಪನ್ಯಾಸಕ, ಬಳಗದ ಅಧ್ಯಕ್ಷ ಎಚ್.ಬಿ.ಪಾಟೀಲ ಮಾತನಾಡಿ, ಫಡ್ಕೆ ಅವರು ಬ್ರಿಟಿಷರ ವಿರುದ್ಧ ಹೋರಾಟವನ್ನು ಅತ್ಯಂತ ಯಶಸ್ವಿಯಾಗಿ ಮಾಡಿದ್ದಾರೆ. ಬ್ರಿಟಿಷರು ಬಡವರಿಗೆ ಮಾಡುತ್ತಿದ್ದ ವಿವಿಧ ರೀತಿಯ ಶೋಷಣೆಯ ವಿರುದ್ಧ ಹೋರಾಟ ಮಾಡಿದರು. ಫಡ್ಕೆ ಅವರಲ್ಲಿದ್ದ ಅಪ್ರತಿಮ ದೇಶಭಕ್ತಿ, ಸಾಮಾಜಿಕ ಕಾಳಜಿ ಈಗಿನ ಯುವಜನತೆಯಲ್ಲಿ ಬರಬೇಕಾಗಿದೆ. ಲಕ್ಷಾಂತರ ಜನ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನದ ಸಂಕೇತ ಸ್ವಾತಂತ್ರ್ಯವಿದೆ ಎಂಬುದನ್ನು ಮರೆಯದೆ, ದೇಶ ಸೇವೆಯನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲುರ, ಶಿವಪುತ್ರಯ್ಯ ಸ್ವಾಮಿ, ಗುರುಪಾದಯ್ಯ ಮಠ, ಶಿವಪುತ್ರಪ್ಪ ರಾಮಶೇಟ್ಟಿ, ಶಂಕರ ಸಾವಳಗಿ, ಮಲ್ಲಿಕಾರ್ಜುನ ಬರುಡೆ, ಮಹಾಂತೇಶ ಬಿರಾದಾರ, ಶರಣಬಸಪ್ಪ ಬೊರೋಟಿ, ಬಸವಣ್ಣಪ್ಪ ಪಾಟೀಲ, ಶ್ರೀಮಂತ ಕಣ್ಣಿ, ಬಸಣ್ಣ ಜಮಾದಾರ, ಗಣೇಶ ಬೋಧನ, ಸಿದ್ದರಾಮ ತಳವಾರ ಸೇರಿದಂತೆ ಬಡಾವಣೆಯ ನಾಗರಿಕರು ಭಾಗವಹಿಸಿದ್ದರು.