ದೇಶದ ಸ್ವಾತಂತ್ರ್ಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯ ಪಾತ್ರ ಪ್ರಮುಖ

ಕಲಬುರಗಿ:ಆ.9: ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡಲು ಅಸಂಖ್ಯಾತ ಭಾರತಿಯರು ನಿರಂತರವಾಗಿ ಹೋರಾಟ ಮಾಡಬೇಕಾಯಿತು. ಸ್ವಾತಂತ್ರ್ಯಕ್ಕಾಗಿ ಜರುಗಿದ ಸಾಕಷ್ಟು ಹೋರಾಟಗಳಲ್ಲಿ ‘ಕ್ವಿಟ್ ಇಂಡಿಯಾ ಚಳುವಳಿ’ ಅತ್ಯಂತ ಪ್ರಮುಖವಾಗಿದೆ. ‘ಮಾಡು ಇಲ್ಲವೇ ಮಡಿ’, ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂಬ ಘೋಷಣೆಯೊಂದಿಗೆ ಜರುಗಿದ ಈ ಚಳುವಳಿ ಜನಸಾಮಾನ್ಯರ ಚಳುವಳಿಯಾಗಿದ್ದರಿಂದ ಮುಂದೆ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ತನ್ನದೇ ಆದ ಪ್ರಮುಖ ಪಾತ್ರ ವಹಿಸಿತು ಎಂದು ಉಪನ್ಯಾಸಕ, ಸಮಾಜ ಸೇವಕ ಎಚ್.ಬಿ.ಪಾಟೀಲ ಹೇಳಿದರು.

     ಜೇವರ್ಗಿ ಪಟ್ಟಣದ ಬಸ್ ನಿಲ್ದಾಣ ಸಮೀಪದ 'ನರೇಂದ್ರ ಪದವಿ ಪೂರ್ವ ಕಾಲೇಜ್'ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದ ವತಿಯಿಂದ ಬುಧವಾರ ಏರ್ಪಡಿಸಲಾಗಿದ್ದ 'ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆ'ಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಭಾವಚಿತ್ರಕ್ಕೆ ಪುಷ್ಪನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

‘ಕ್ವಿಟ್ ಇಂಡಿಯಾ ಚಳುವಳಿ’ಯಲ್ಲಿ ದೇಶದ ಜನರೇ ಹೆಚ್ಚಾಗಿ ಸ್ವ-ಇಚ್ಛೆಯಿಂದ ಚಳುವಳಿಯಲ್ಲಿ ಭಾಗವಹಿಸಿದ್ದರಿಂದ ಎಲ್ಲೆಡೆ ವ್ಯಾಪಕವಾಗಿ ಹರಡಿ ಸ್ವಾತಂತ್ರ್ಯ ಪಡೆಯುವಲ್ಲಿ ಸಹಕಾರಿಯಾಯಿತು. ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಆಸ್ತಿ-ಪಾಸ್ತಿ, ಜೀವವನ್ನು ನೀಡಿ ಸ್ವಾಂತ್ರ್ಯ ನೀಡಿದ್ದಾರೆ. ವಿಶ್ವಕ್ಕೆ ಗುರುವಾಗಬಲ್ಲ ಶಕ್ತಿ ಭಾರತಕ್ಕಿದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು.

ಕಾಲೇಜಿನ ಪ್ರಾಚಾರ್ಯ ದೇವೇಂದ್ರ ಬಿ.ಗುಡುರ್ ಮಾತನಾಡಿ, ನಮ್ಮ ದೇಶದ ಸ್ವಾತಂತ್ರಕ್ಕಾಗಿ ಲಕ್ಷಾಂತರ ಹೋರಾಟಗಾರರು ತಮ್ಮ ಜೀವವನ್ನು ನೀಡಿ ದೇಶಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟಿದ್ದಾರೆ. ಅವರಲ್ಲಿರುವ ದೇಶಪ್ರೇಮ, ರಾಷ್ಟ್ರಭಕ್ತಿ, ಐಕ್ಯತೆ, ಭ್ರಾತೃತ್ವ ಭಾವನೆಯಂತಹ ಗುಣಗಳನ್ನು ಪ್ರತಿಯೊಬ್ಬ ಭಾರತೀಯ ಮೈಗೂಡಿಸಿಕೊಂಡು ಅವರು ದೊರಕಿಸಿಕೊಟ್ಟ ಸ್ವಾತಂತ್ರ್ಯದ ಮೌಲ್ಯಗಳನ್ನು ಕಾಪಾಡಿಕೊಂಡು ದೇಶವನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಮಂಜುನಾಥ ಬಿ.ಗುತ್ತೇದಾರ, ಕಾಲೇಜಿನ ಉಪನ್ಯಾಸಕರಾದ ರಾಯಣ್ಣ ಕಟ್ಟಿಮನಿ, ಮಲ್ಲಿಕಾರ್ಜುನ ಭಾಸಗಿ, ನಬಿಪಟೇಲ್ ಈಜೇರಿ, ಶಾಂತಕುಮಾರ ಯಲಗೂಡ, ಶಿವಾನಂದ ಸಿಂಪಿ, ಕಲ್ಪನಾರೆಡ್ಡಿ, ಮೌನೇಶ ಸೋಮನಾಥಹಳ್ಳಿ, ವೀರೇಶ ಗೋಗಿ, ಬಸವರಾಜ ಆಂದೋಲಾ ಸೊನ್ನ್, ದ್ಯಾವಣ್ಣ ಸೋಮನಾಥಹಳ್ಳಿ, ಸರಸ್ವತಿ ಹಾಗೂ ವಿದ್ಯಾರ್ಥಿಗಳಿದ್ದರು.