ದೇಶದ ಸ್ವಾತಂತ್ರ್ಯದಲ್ಲಿ ಉಪ್ಪಿನ ಸತ್ಯಾಗ್ರಹ ಪ್ರಮುಖ

ಕಲಬುರಗಿ:ಎ.10: ದೇಶದ ಸ್ವಾತಂತ್ರ ಚಳುವಳಿ ಇತಿಹಾಸದಲ್ಲಿ ಮುಖ್ಯವಾಗಿದೆ. ಮಹಾತ್ಮ ಗಾಂಧೀಜಿಯವರು ಬ್ರಿಟಿಷರ ಆಡಳಿತ ಕಾಲದಲ್ಲಿ ಉಪ್ಪಿನ ಮೇಲೆ ವಿಧಿಸಿ ತೆರಿಗೆಯನ್ನು ವಿರೋಧಿಸಿ ತಮ್ಮ ಅನುಯಾಯಿಗಳೊಡನೆ ಸಾಬರಮತಿ ಆಶ್ರಮದಿಂದ ಸಮುದ್ರ ದಡದಲ್ಲಿರುವ ದಂಡಿಯವರೆಗಿನ 240 ಮೈಲಿಗಳನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿ 1930ರ ಎಪ್ರಿಲ್ 6ರಂದು ಉಪ್ಪನ್ನು ತಯಾರಿಸಿ, ಬ್ರಿಟಿಷರಿಗೆ ಬಿಸಿ ಮುಟ್ಟಿಸುವ ಮೂಲಕ ದೇಶದ ಸ್ವಾತಂತ್ರ ಚಳುವಳಿಯಲ್ಲಿ ಪ್ರಮುಖವಾದ ಸ್ಥಾನವನ್ನು ಪಡೆದಿದೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಶಹಾಬಜಾರ ಮಹಾದೇವ ನಗರದಲ್ಲಿರುವ ‘ಶಿವಾ ವಿದ್ಯಾಮಂದಿರ’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ಉಪ್ಪಿನ ಸತ್ಯಾಗ್ರಹ ಚಳುವಳಿಯ ದಿನಾಚರಣೆ’ ಕಾರ್ಯಕ್ರಮದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ, ಸಮಾಜ ಸೇವಕ, ನ್ಯಾಯವಾದಿ ಡಾ.ಸುನೀಲಕುಮಾರ ಎಚ್.ವಂಟಿ ಮಾತನಾಡಿ, ಸಮುದ್ರ ದಡದಲ್ಲಿರುವ ನಾಗರಿಕರಿಗೆ ಉಪ್ಪು ಉಚಿತವಾಗಿ ದೊರೆಯುತ್ತಿದ್ದರೂ ಕೂಡಾ ಅದನ್ನು ಸರ್ಕಾರದಿಂದ ಖರೀದಿಸುವಂತೆ ಮಾಡಲಾಗಿತ್ತು. ಇದರಿಂದ ಬಡವರು, ಜನಸಾಮಾನ್ಯರಿಗೆ ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದನ್ನು ಗಮನಿಸಿದ ಮಹಾತ್ಮ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ(ದಂಡಿಯಾತ್ರೆ)ಯನ್ನು ಮಾಡುವ ಮೂಲಕ ಅವರಿಗೆ ನ್ಯಾಯವನ್ನು ಒದಗಿಸಿಕೊಟ್ಟರು. ಇದು ಸ್ವಾತಂತ್ರ್ಯ ಚಳುವಳಿಗೆ ಪ್ರಖರತೆಯ ಹೆಚ್ಚಳಕ್ಕೆ ಕಾರಣವಾಯಿತು ಎಂದರು.

ಕಾರ್ಯಕ್ರಮದಲ್ಲಿ ದೇವೇಂದ್ರಪ್ಪ ಗಣಮುಖಿ, ಚನ್ನಬಸಪ್ಪ ಗಾರಂಪಳ್ಳಿ, ಸುಜಯ್ ಎಸ್.ವಂಟಿ ಸೇರಿದಂತೆ ಇನ್ನಿತರರು ಇದ್ದರು.