ದೇಶದ ಸ್ವಾತಂತ್ರ್ಯಕ್ಕೆ ರೋಣ ತಾಲೂಕಿನ ಕೊಡುಗೆ ಅಪಾರ

ನರೇಗಲ್ಲ, ಏ17: ರೋಣ ತಾಲೂಕಿನ ಜಕ್ಕಲಿ ಗ್ರಾಮಕ್ಕೆ ಗಾಂಧೀಜಿ ಹಾಗೂ ಜವಾಹರಲಾಲ ನೆಹರೂ ಭೇಟಿ ನೀಡಿದ ನಂತರ 1934ರಲ್ಲಿ ಅಂದಾನಪ್ಪ ದೊಡ್ಡಮೇಟಿ ಅವರ ನೇತೃತ್ವದಲ್ಲಿ ಈ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಪ್ರಜ್ವಲಿಸಿತು ಎಂದು ನಿವೃತ್ತ ಶಿಕ್ಷಕ ಎಂ.ಎಸ್. ಧಡೇಸೂರಮಠ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ರೋಣ ತಾಲೂಕಾ ಆಡಳಿತದಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ರೋಣ ತಾಲೂಕಿನ ಸ್ವಾತಂತ್ರ್ಯ ಹೋರಾಟಗಾರದಾದ ಶಿವಪ್ಪ ನೆಲ್ಲೂರ, ವಿರೂಪಾಕ್ಷಪ್ಪ ಅಬ್ಬಿಗೇರಿ, ಅಂದಾನಪ್ಪ ಕುಂದರಗಿ, ಶಂಕ್ರಪ್ಪ ಮೊಂಡಸೊಪ್ಪಿ, ಬಸೆಟ್ಟೆಪ್ಪ ಜಕ್ಕಲಿ, ಶೇಖರಯ್ಯ ಸಂಗನಾಳಮಠ, ಶಂಕ್ರಪ್ಪ ಜೋಳದ, ಕಾಶಿನಾಥ ಶಾಸ್ತ್ರಿ ಗಚ್ಚಿನಮಠ, ಕೃಷ್ಣಾಚಾರಿ ಜೋಶಿ, ಗುರುಸಿದ್ದಪ್ಪ ನಾಯಕ, ಅಂದಪ್ಪ ಕೋಮಾರ, ಕಾಶಿಸಾಬ ಮನ್ನಾಪೂರ, ಮಹದೇವಪ್ಪ ಗಾಣಿಗೇರ, ಗುರುಸಿದ್ದಪ್ಪ ಪಲ್ಲೇದ, ಅಂದಪ್ಪ ಬಳಿಗೇರ, ಬಸಪ್ಪ ಮಾಸ್ತರ ಬ್ರಿಟಿಷರ ವಿರುದ್ಧ ತೊಡೆ ತಟ್ಟಿ ನಿಂತು ಸ್ವಾತಂತ್ರ್ಯಕ್ಕೆ ಹೋರಾಟಕ್ಕೆ ಮುನ್ನುಡಿ ಬರೆದವರು. ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿ ಸೇರಿದಂತೆ ಗದಗ ಜಿಲ್ಲೆಯ ಅನೇಕ ಮಹಾನಿಯರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದು, ಇಂದಿನ ಯುವಕರು ಅವರ ನೀತಿಯಲ್ಲಿ ನಡೆಯಬೇಕಾಗಿದೆ. ಸ್ವಾತಂತ್ರ್ಯ ಹೋರಾಟದ ಆ ದಿನಗಳನ್ನು ನಾವು ನೋಡಿಲ್ಲ, ಆದರೆ ಹೋರಾಟದ ಆ ದಿನಗಳನ್ನು ನಾವಿಂದು ಅರಿಯೋಣ. ಅರಿಯುವ ಮೂಲಕ ಅವರ ಆದರ್ಶದಂತೆ ಬದುಕೋಣ. ನಾವು ಇತಿಹಾಸವನ್ನು ಅರಿಯಬೇಕಾದ ಮತ್ತು ಇತಿಹಾಸದ ಮೌಲ್ಯಗಳನ್ನು ನೆನೆಯಬೇಕಾದ ಅಗತ್ಯವಿದೆ. ಇತಿಹಾಸವನ್ನರಿಯದೇ ಭವಿಷ್ಯವನ್ನು ನಿರ್ಮಿಸಲು ಸಾಧ್ಯವಿಲ್ಲ. ನಮ್ಮ ಭವ್ಯ ಭಾರತದ, ಭವ್ಯ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಸ್ಮರಿಸುವ ಸುದಿನವಿಂದು ನಮಗೆ ಲಭಿಸಿದೆ. ಪ್ರಧಾನಿಗಳ ಆಶಯದಂತೆ ಅಮೃತ ಮಹೋತ್ಸವ ಕಾರ್ಯಕ್ರಮ ನವ ಭಾರತದ ಕ್ರಾಂತಿಗೆ ಮುನ್ನಡೆಯಾಗಲಿ ಎಂದರು.
ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷಕುಮಾರ ಪಾಟೀಲ ಮಾತನಾಡಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಮುಂದಿನ ವರ್ಷ ಅಂದರೆ 2022ಕ್ಕೆ 75 ವರ್ಷ ಪೂರೈಸುತ್ತಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೇಶ್ಯಾದಂತ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದಕ್ಕೆ ರೋಣ ತಾಲೂಕಿನ ಜಕ್ಕಲಿ ಗ್ರಾಮದಿಂದ ಚಾಲನೆ ನೀಡಲಾಗುತ್ತಿದೆ. ಇಂದಿನಿಂದ 75 ವಾರಗಳ ಕಾಲ 75 ವಿವಿಧ ಕಡೆಗಳಲ್ಲಿ ಕಾರ್ಯಕ್ರಮ ನೆರವೇರಲಿದೆ. ಪ್ರಧಾನಂತ್ರಿ ನರೇಂದ್ರ ಮೋದಿ ಅವರು ಈ ಅಮೃತ ಮಹೋತ್ಸವಕ್ಕೆ ಮಾರ್ಚ್ 12 ರಂದು ಗುಜರಾತ್‍ನ ಸಬರಮತಿ ಆಶ್ರಮದಲ್ಲಿ ಚಾಲನೆ ನೀಡಿದ್ದಾರೆ. ಅವರ ಆಶಯದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ವಾತಂತ್ರ್ಯವದ ಅಮೃತ ಮಹೋತ್ಸವ ಆಚರಿಸಲು ಮುಂದಾಗಿದ್ದೇವೆ ಎಂದರು.
ಉಪನ್ಯಾಸಕ ಎಫ್.ಎನ್. ಹುಡೇದ ಆತ್ಮ ನಿರ್ಭರ ಕುರಿತು ಉಪನ್ಯಾಸ ನೀಡಿದರು. ತಾ.ಪಂ ಅಧ್ಯಕ್ಷೆ ಪ್ರೇಮವ್ವ ನಾಯಕ, ಅಂದಾನೇಶ ದೊಡ್ಡಮೇಟಿ, ಗ್ರಾ.ಪಂ ಅಧ್ಯಕ್ಷ ವೀರಪ್ಪ ವಾಲಿ, ರೋಣ ತಹಸೀಲ್ದಾರ ಜಿ.ಬಿ. ಜಕ್ಕನಗೌಡ್ರ, ಸಿಡಿಪಿಓ ಬೇಟದೇಶ ಮಾಳೆಕೊಪ್ಪ, ಲೋಕೋಪಯೋಗಿ ಇಲಾಖೆ ಅಧಿಕಾರಿ ಐ.ಬಿ. ಹೊಸೂರ, ಸಮಾಜ ಕಲ್ಯಾಣಾಧಿಕಾರಿ ಬಿ.ವಿ. ಸಂಗನಾಳ, ಕೃಷಿ ಅಧಿಕಾರಿ ಸಾವಿತ್ರಿ ಶಿವನಗೌಡ್ರ, ಪಿಡಿಒ ಎಸ್.ಎಸ್. ರಿತ್ತಿ, ಮುತ್ತು ಕಡಗದ, ಪ್ರಕಾಶ ವಾಲಿ, ಹರ್ಷವರ್ಧನ ದೊಡ್ಡಮೇಟಿ, ಸೇರಿದಂತೆ ವಿವಿಧ ಇಲಾಖೆಗಳ ಮುಖ್ಯಸ್ಥರು, ಆಶಾ ಕಾರ್ಯಕರ್ತರು ಸೇರಿದಂತೆ ಗ್ರಾ.ಪಂ ಸಿಬ್ಬಂದಿಗಳು ಇದ್ದರು.