ದೇಶದ ಸ್ವಾತಂತ್ರ್ಯಕ್ಕೆ ಬಂಕಿಮಚಂದ್ರ ಚಟರ್ಜಿ ಕೊಡುಗೆ ಅನನ್ಯ

ಕಲಬುರಗಿ: ಎ.9:ಬ್ರಿಟಿಷ್ ಸರ್ಕಾರದಲ್ಲಿ ನೌಕರರಾಗಿದ್ದರು ಕೂಡಾ ಅವರ ದಬ್ಬಾಳಿಕೆಯನ್ನು ವಿರೋಧಿಸಿ ತಮ್ಮದೇ ಆದ ಹರಿತವಾದ ಲೇಖನವನ್ನು ಬರೆಯುವ ಮೂಲಕ ಪ್ರತಿಯೊಬ್ಬರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿದ ಬಂಕಿಮಚಂದ್ರ ಚಟರ್ಜಿ, ಸ್ವಾತಂತ್ರ್ಯ ಹೋರಾಟಗಾರ, ಕವಿ, ಲೇಖಕ, ಪರ್ತಕರ್ತ, ಚಿಂತಕರಾಗಿ ದೇಶದ ಸ್ವಾತಂತ್ರ್ಯಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.

ನಗರದ ಆಳಂದ ರಸ್ತೆಯ ಶಿವನಗರದಲ್ಲಿರುವ ‘ಜ್ಞಾನಚಿಗುರು ಟ್ಯೂಟೋರಿಯಲ್ಸ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ಬಂಕಿಮಚಂದ್ರ ಚಟರ್ಜಿಯವರ ಸ್ಮರಣೋತ್ಸವ’ದ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

‘ವಂದೇ ಮಾತರಂ’ ಗೀತೆಯನ್ನು ರಚಿಸಿ ಭಾರತಿಯರೆಲ್ಲರೂ ಸ್ವಾತಂತ್ರ ಚಳುವಳಿಯಲ್ಲಿ ಧುಮುಕುವಂತೆ ಪ್ರೇರೇಪಿಸಿದರು. ‘ಆನಂದ ಮಠ’ ಎಂಬ ಬಹು ಮೌಲಿಕವಾದ ಪ್ರಸಿದ್ಧ ಕಾದಂಬರಿಯನ್ನು ರಚಿಸಿದ್ದಾರೆ. ‘ವಂಗ ದರ್ಶನ’ ಎಂಬ ಪತ್ರಿಕೆಯ ಮೂಲಕ ಜನಜಾಗೃತಿಯನ್ನುಂಟು ಮಾಡಿದರು. ಬ್ರಿಟಿಷರಿಂದ ಭಾರತಿಯರಿಗಾಗುತ್ತಿದ್ದ ಅನ್ಯಾಯವನ್ನು ಖಂಡಿಸಿ ಸರ್ಕಾರಿ ಸೇವೆಯನ್ನು ತ್ಯಜಿಸಿ ದೇಶಕ್ಕಾಗಿ ದುಡಿದ ಮಹಾನ ಚೇತನ ಚಟರ್ಜಿಯವರಾಗಿದ್ದಾರೆಂದರು.

ಚಿಂತಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ಸತ್ಯ, ಅಹಿಂಸೆ, ನ್ಯಾಯಯುತವಾಗಿ ಹೋರಾಡುವ ಮೂಲಕ ನಮ್ಮ ದೇಶಕ್ಕೆ ಸ್ವಾತಂತ್ರ ದೊರಕಿಸಿಕೊಟ್ಟ ಅನೇಕ ಸ್ವಾತಂತ್ರ ಹೋರಾಟಗಾರರ ಪರಿಶ್ರಮ ನಾವೆಂದಿಗೂ ಮರೆಯುವಂತಿಲ್ಲ. ದೇಶಕ್ಕಾಗಿ ತಮ್ಮ ಜೀವನದೂದ್ದಕ್ಕೂ ಶ್ರಮಿಸಿದ ಚಟರ್ಜಿಯವರ ಜೀವನ, ಸಂದೇಶ ಹಾಗೂ ಕೊಡುಗೆಯನ್ನು ಯುವಕರು ಅರಿತುಕೊಳ್ಳವುದು ಅಗತ್ಯವಾಗಿದೆಯೆಂದು ನುಡಿದರು.

 ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಬಸವರಾಜ ಎಸ್.ಪುರಾಣೆ, ಅಣ್ಣಾರಾಯ ಎಚ್.ಮಂಗಾಣೆ, ದೇವೇಂದ್ರಪ್ಪ ಗಣಮುಖಿ, ಮಲ್ಲಿಕಾರ್ಜುನ ಜಿ.ಬಂಗರಗಿ, ಅಮರ ಜಿ.ಬಂಗರಗಿ ಸೇರಿದಂತೆ ಮತ್ತಿತರರಿದ್ದರು.