ದೇಶದ ಸ್ವಾತಂತ್ರ್ಯಕ್ಕೆ ಚಿತ್ತರಂಜನ ದಾಸ್ ಕೊಡುಗೆ ಅನನ್ಯ

ಕಲಬುರಗಿ,ಜೂ.16: ಸ್ವಾತಂತ್ರ್ಯ ಹೋರಾಟಗಾರ, ‘ದೇಶಬಂಧು’ ಎಂಬ ಖ್ಯಾತಿಯ ಚಿತ್ತರಂಜನ ದಾಸ್ ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತರಾಗಿ, ಸಾಹಿತಿಯಾಗಿ ದೇಶಕ್ಕೆ ತಮ್ಮದೇ ಆದ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಉಪನ್ಯಾಸಕ, ಚಿಂತಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಮಹಾದೇವ ನಗರದ ಶಿವಾ ವಿದ್ಯಾ ಮಂದಿರ ಪ್ರೌಢಶಾಲೆಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಶುಕ್ರವಾರ ಜರುಗಿದ ‘ಚಿತ್ತರಂಜನ ದಾಸ್ ಸ್ಮರಣೋತ್ಸವ’ದಲ್ಲಿ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಚನ್ನಬಸಪ್ಪ ಗಾರಂಪಳ್ಳಿ ಮಾತನಾಡಿ, ಚಿತ್ತರಂಜನ ದಾಸ್ ಅವರು ಅಸಹಕಾರ ಚಳುವಳಿಯ ಮೂಲಕ ಬ್ರಿಟಿಷರ ವಿರುದ್ಧ ನಿರಂತರವಾಗಿ ಹೋರಾಟ ಮಾಡಿದ್ದಾರೆ. ತಮ್ಮ ಹರಿತವಾದ ಬರವಣಿಗೆಯ ಮೂಲಕ ಬ್ರಿಟಿಷರ ಶೋಷಣೆಯನ್ನು ಜನಸಾಮಾನ್ಯರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಿ ಸ್ವಾತಂತ್ರ್ಯ ಚಳುವಳಿಯಲ್ಲಿ ಜನಸಾಮಾನ್ಯರು ಭಾಗವಹಿಸುವಂತೆ ಮಾಡಲು ಪ್ರೇರಣೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಬಸಯ್ಯಸ್ವಾಮಿ ಹೊದಲೂರ, ಸಿಆರ್‍ಸಿ ವೀರೇಶ ಬೋಳಶೆಟ್ಟಿ ನರೋಣಾ, ಮುಖ್ಯ ಶಿಕ್ಷಕಿ ಸಂಗೀತಾ ಸಿ.ಗಾರಂಪಳ್ಳಿ ಸೇರಿದಂತೆ ಮತ್ತಿತರರಿದ್ದರು.