
ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ 3 :- ದೇಶದ ಸುರಕ್ಷತೆ ಕಾಪಾಡುವ ಬಿಜೆಪಿ ಅಧಿಕಾರವನ್ನು ಜನತೆ ಬೆಂಬಲಿಸುತ್ತಿದ್ದು ಮತ್ತೊಮ್ಮೆ ಮಗದೊಮ್ಮೆ ಅಧಿಕಾರ ಹಿಡಿಯುವುದು ಖಚಿತ ಎಂದು ಕೂಡ್ಲಿಗಿ ಶಾಸಕ ಎನ್ ವೈ ಗೋಪಾಲಕೃಷ್ಣ ಭವಿಷ್ಯ ನುಡಿದರು.
ತಾಲೂಕಿನ ಹುರುಳಿಹಾಳು ಗ್ರಾಮದಲ್ಲಿ ಸೋಮವಾರ ನಡೆದ ಬಿಜೆಪಿ ಬೂತ್ ವಿಜಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ಆಡಳಿತದಿಂದ ದೇಶದ ಜನರು ಸುರಕ್ಷಿತವಾಗಿರುವುದರಿಂದ ಜನತೆ ಇನ್ನೂ ಹತ್ತು ವರ್ಷಗಳ ಕಾಲ ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ.
ಕೊರೋನಾದಂಥ ಸಂಕಷ್ಟದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಮೂಲಕ ಜನರ ಜೀವರಕ್ಷಣೆ ಮಾಡಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕಳೆದ ನಾಲ್ಕೂವರೆ ವರ್ಷದ ಆಡಳಿತದಲ್ಲಿ ಕೂಡ್ಲಿಗಿ ಕ್ಷೇತ್ರಕ್ಕೆ ಮೂಲ ಸೌಲಭ್ಯಗಳಾದ ರಸ್ತೆಗಳ ಅಭಿವೃದ್ಧಿ, ಸಮರ್ಪಕ ಕುಡಿಯುವ ನೀರು ಪೂರೈಕೆ, ಶಿಕ್ಷಣ, ಆರೋಗ್ಯ ಸೇರಿ ಇತರೆ ಕ್ಷೇತ್ರಗಳ ಅಭಿವೃದ್ಧಿ ಹಾಗೂ ತಾಲೂಕಿನ 80 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಜಾರಿಗೆ ತಂದು ಜನರ ಋಣ ತೀರಿಸಿದ್ದೇನೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ತಿಳಿಸಿದರಲ್ಲದೆ, ಬಿಜೆಪಿಯು ಬೂತ್ ಮಟ್ಟದಿಂದ ಕಾರ್ಯಕರ್ತರನ್ನು ಹೊಂದಿರುವ ಪಕ್ಷವಾಗಿದ್ದು, ಮುಂಬರುವ ದಿನಗಳಲ್ಲಿ ಬಿಜೆಪಿಯನ್ನು ಬೆಂಬಲಿಸಿದರೆ ಉತ್ತಮ ಭವಿಷ್ಯ ಇರಲಿದೆ ಎಂದು ತಿಳಿಸಿದರು.
ಬಿಜೆಪಿ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮದುರ್ಗ ಸೂರ್ಯಪಾಪಣ್ಣ ಮಾತನಾಡಿ, ಬಿಜೆಪಿಯು ತಳಹಂತದಿಂದ ಸಂಘಟನೆಯಲ್ಲಿ ತೊಡಗಿದ್ದು, ಬೂತ್ ಹಂತದ ಕಾರ್ಯಕರ್ತರ ಜವಾಬ್ದಾರಿಗೆ ಪಕ್ಷವು ಹೆಚ್ಚಿನ ಮಹತ್ವ ನೀಡಲಿದೆ. ಎಲ್ಲಾ ಹಂತದ ಕಾರ್ಯಪಡೆ ಬಿಜೆಪಿಯಲ್ಲಿದ್ದು, ಇದೊಂದು ಶಿಸ್ತಿನ ಪಕ್ಷವಾಗಿದೆ. ಅಲ್ಲದೆ, ಎಲ್ಲಾ ವರ್ಗದ ಸಕ್ರಿಯ ಕಾರ್ಯಕರ್ತರು ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾರೆ. ಬೂತ್ ಮಟ್ಟದಿಂದ ಪಕ್ಷದ ಸಂಘಟನೆಗೆ ಒತ್ತು ನೀಡುವುದರ ಜೊತೆಗೆ ಬೂತ್ ಹಂತದ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವೂ ಬಿಜೆಪಿಯಿಂದ ಆಗಲಿದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ಕಾರ್ಯಕರ್ತರು ಮಾಡಬೇಕಿದೆ. ಅಲ್ಲದೆ, ಕೂಡ್ಲಿಗಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ಹೆಚ್ಚಿನ ಒತ್ತು ನೀಡಿದ್ದಾರೆ. ಹೀಗಾಗಿ, ಮುಂಬರುವ 2023ರ ಚುನಾವಣೆಯಲ್ಲಿ ಕೂಡ್ಲಿಗಿ ಕ್ಷೇತ್ರದಲ್ಲಿ ಮತ್ತೊಮ್ಮೆ ಬಿಜೆಪಿ ಬಾವುಟ ಹಾರಿಸಲು ಎಲ್ಲರೂ ಸನ್ನದ್ಧರಾಗಬೇಕಿದೆ ಎಂದು ತಿಳಿಸಿದರು.
ಬಿಜೆಪಿ ಕೂಡ್ಲಿಗಿ ಮಂಡಲ ಅಧ್ಯಕ್ಷ ಕೆ.ಚನ್ನಪ್ಪ, ಮುಖಂಡರಾದ ಬಿ.ಪಿ.ಚಂದ್ರಮೌಳಿ, ವಡ್ಡರಹಟ್ಟಿ ಮಲ್ಲೇಶಪ್ಪ, ಎಸ್ಟಿ ಮೋರ್ಚಾ ವಿಜಯನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಭೀಮೇಶ್, ಎಸ್ಟಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹುಡೇಂ ಪಾಪನಾಯಕ, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ದುರುಗೇಶ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಮದೇವಿ ಕಾಂತರಾಜ್, ಜಿಪಂ ಮಾಜಿ ಅಧ್ಯಕ್ಷೆ ದೀನಾ ಮಂಜುನಾಥ, ಜಿಪಂ ಮಾಜಿ ಸದಸ್ಯ ಹುರುಳಿಹಾಳ್ ಹೊಂಬಾಳೆ ರೇವಣ್ಣ, ಯುವಮೋರ್ಚಾ ಅಧ್ಯಕ್ಷ ಗುಳಿಗಿ ವೀರೇಶ್, ಹಿಂದುಳಿದ ವರ್ಗಗಳ ರಾಜ್ಯ ಪ್ರಕೋಷ್ಠ ಸದಸ್ಯ ಸಣ್ಣಬಾಲಪ್ಪ, ಕೂಡ್ಲಿಗಿ ಪಪಂ ಸದಸ್ಯ ಹಾಗೂ ಎಸ್ಟಿ ಮೋರ್ಚಾ ತಾಲೂಕು ಅಧ್ಯಕ್ಷ ಪಿ.ಚಂದ್ರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಧುಸೂಧನ, ಮುಖಂಡರಾದ ಪ್ರಾಣೇಶ್, ಯಂಬಳಿ ಗಂಗಣ್ಣ ಇತರರಿದ್ದರು.