ದೇಶದ  ಸುಭದ್ರತೆಗೆ ನಮ್ಮ ಮತದಾನ


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಏ.16 :- ರಾಷ್ಟ್ರದ ಹಿತ ಹಾಗೂ ಪ್ರಜಾತಂತ್ರದ ಸುಭದ್ರತೆಗೆ ಮತ್ತು  ದೇಶದ ಅಭಿವೃದ್ಧಿ ದೃಷ್ಟಿ ಇಟ್ಟುಕೊಂಡು ಪ್ರತಿಯೊಬ್ಬ ಮತದಾರರು ತಪ್ಪದೆ ತಮ್ಮ  ಸಂವಿಧಾನ ಬದ್ದ ಹಕ್ಕನ್ನು ಚಲಾಯಿಸಬೇಕು ಎಂದು ಲೋಕಸಭಾ ಚುನಾವಣೆಯ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಡಾ ಹೆಚ್ ಎನ್ ರಘು ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದಲ್ಲಿ ಸೋಮವಾರ ಸಂಜೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಜಾಗೃತಿಗಾಗಿ  ಪಂಜಿನ ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತ ಮತದಾನ ಕುರಿತು ವಿವಿಧ ರೀತಿಯಲ್ಲಿ ಜಾಗೃತಿ ಕಾರ್ಯಕ್ರಮಗಳ ಮೂಲಕ ಮತದಾನದ ಮಹತ್ವವನ್ನು ತಿಳಿಸಲಾಗುತ್ತಿದೆ ಇದರಿಂದ ಮತದಾರರು ಮೇ 7ರಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತೆ ಮನವಿ ಮಾಡಿದರು.
ತಾಲೂಕು ಪಂಚಾಯಿತಿ ಇಒ ಹಾಗೂ ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ವೈ.ರವಿಕುಮಾರ್ ಮಾತನಾಡಿ, ಪ್ರಜಾಪ್ರಭುತ್ವದ ಮಹತ್ವ ಅರಿತು ಪ್ರಜೆಗಳೇ ಪ್ರಭುಗಳಾಗಿದ್ದು ಮತದಾನವೆಂಬ ಅಸ್ತ್ರವನ್ನು ಬಳಸಿ ದೇಶದ ಸುಭದ್ರತೆಗೆ ಉತ್ತಮ ಪ್ರಜಾನಾಯಕನ ಆಯ್ಕೆ ನಿಮ್ಮದಾಗಲಿ ಅಲ್ಲದೆ ಮತದಾನ ಸಂವಿಧಾನ ಹಕ್ಕನ್ನು ಅದನ್ನು ವಂಚಿಸದಂತೆ ಚಲಾಯಿಸಿ  ಪ್ರತಿಯೊಬ್ಬರೂ ಮೇ 7ರಂದು ನಡೆಯುವ ಮತದಾನದ ದಿನ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರಾಜು ಪಿರಂಗಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನಿಲ್ ಕುಮಾರ್, ಸಿಡಿಪಿಒ ನಾಗನಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಪಿ.ಪ್ರದೀಪ ಕುಮಾರ್, ಪಪಂ ಮುಖ್ಯಾಧಿಕಾರಿ ಫಿರೋಜ್ ಖಾನ್ ಸೇರಿ ಎಲ್ಲಾ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘದ ಪದಾಧಿಕಾರಿಗಳು ಇದ್ದರು. ಪಟ್ಟಣದ ಮಹಾತ್ಮಾ ಗಾಂಧೀಜಿ ಚಿತಾಭಸ್ಮವಿರುವ ರಾಷ್ಟೀಯ  ಹುತಾತ್ಮರ  ಸ್ಮಾರಕದಿಂದ ಹೊರಟ ಪಂಚಿನ ಮೆರವಣಿಗೆ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಸೇರಿ ಪಟ್ಟಣ ಪಂಚಾಯತಿ ಮುಂದೆ ಸಭೆ ಸೇರಿ ಮತದಾನ ಜಾಗೃತಿ ಅರಿವು ಮೂಡಿಸಿದ ಅಧಿಕಾರಿಗಳು ಪಟ್ಟಣದ  ಪ್ರಮುಖ ಬೀದಿಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದರು.