ದೇಶದ ಸಮಗ್ರ ಅಭಿವೃದ್ಧಿಗೆ ಭ್ರಷ್ಟಾಚಾರವೇ ತೊಡಕು:ಪ್ರಭುಲಿಂಗಯ್ಯ ಹಿರೇಮಠ

ಬಳ್ಳಾರಿ,ಅ.29: ದೇಶದ ಸಮಗ್ರ ಅಭಿವೃದ್ಧಿಗೆ ಭ್ರಷ್ಟಾಚಾರವೇ ಬಹುದೊಡ್ಡ ತೊಡಕಾಗಿದ್ದು,ಅದಕ್ಕೆ ಕಡಿವಾಣ ಹಾಕಿದಲ್ಲಿ ಮಾತ್ರ ಸಮೃದ್ಧ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಭ್ರಷ್ಟಾಚಾರ ನಿಗ್ರಹದಳದ ಇನ್‍ಸ್ಪೆಕ್ಟರ್ ಪ್ರಭುಲಿಂಗಯ್ಯ ಹಿರೇಮಠ ಹೇಳಿದರು.
ಭ್ರಷ್ಟಾಚಾರ ನಿಗ್ರಹದಳದ ವತಿಯಿಂದ ಸತರ್ಕ ಭಾರತ-ಸಮೃದ್ಧ ಭಾರತ ಜಾಗೃತಿ ಅರಿವು ಸಪ್ತಾಹದ ಅಂಗವಾಗಿ ನಗರದ ಡಿಎಆರ್ ಪೊಲೀಸ್ ಮೈದಾನದಲ್ಲಿ ಬುನಾದಿ ತರಬೇತಿ ಪಡೆಯುತ್ತಿರುವ ಮಹಿಳಾ ಪೊಲೀಸ್ ಪೇದೆಗಳಿಗಾಗಿ ಬುಧವಾರ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸರಕಾರಿ ಸೇವೆಯಲ್ಲಿರುವ ನೌಕರರು ತಮ್ಮ ದುರಾಸೆ ಬಿಡಬೇಕು. ಸಾರ್ವಜನಿಕರು ಸರಕಾರಿ ಕಚೇರಿಗಳಿಗೆ ಕೆಲಸದ ನಿಮಿತ್ತ ಭೇಟಿ ನೀಡಿದಾಗ ಅವರ ಅವಶ್ಯಕತೆ ಹಾಗೂ ತೊಂದರೆಗಳನ್ನು ಅರ್ಥ ಮಾಡಿಕೊಂಡು ಅವರಿಂದ ಯಾವುದೇ ಫಲಾಪೇಕ್ಷೆ ಪಡೆಯದೆ ಅವರ ಕಾರ್ಯಗಳನ್ನು ಮಾಡಬೇಕು. ಈ ಮೂಲಕ ಸರಕಾರದ ವಿವಿಧ ಯೋಜನೆಗಳ ಪರಿಣಾಮಕಾರಿ ಬಳಕೆಗೆ ಅನಕೂಲ ಕಲ್ಪಿಸಿಕೊಡಬೇಕು ಎಂದು ಅವರು ಹೇಳಿದರು.
ಜೀವನದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸಬೇಕು. ಎಲ್ಲ ಕಾರ್ಯಗಳನ್ನು ಪ್ರಾಮಾಣಿಕ ಮತ್ತು ಪಾರದರ್ಶಕ ರೀತಿಯಲ್ಲಿ ನಿರ್ವಹಿಸಬೇಕು ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಡಿಎಆರ್ ಡಿವೈಎಸ್ಪಿ ಸರ್ದಾರ್ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಎಸಿಬಿ ಕಚೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.
ಈ ಸತರ್ಕ ಭಾರತ-ಸಮೃದ್ಧ ಭಾರತ ಜಾಗೃತಿ ಅರಿವು ಸಪ್ತಾಹವು ನ.2ರವರೆಗೆ ಜಿಲ್ಲೆಯಾದ್ಯಂತ ನಡೆಯಲಿದೆ.