
ವಿಜಯಪುರ:ಎ.17: ದೇಶದ ಸಮಗ್ರ ಅಭಿವೃದ್ದಿಗೆ ರೂಪಿಸಲಾಗಿರುವ 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬೇಕಾದರೆ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಸಲಹೆ ಮಾಡಿದರು.
ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೆಯ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಶ್ವದಾದ್ಯಂತ ಅನೇಕ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಚರ್ಚಿಸಲಾಗುತ್ತದೆ. ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಆಡಳಿತಗಾರರ ಅಭಿಪ್ರಾಯದ ಪ್ರಕಾರ ಅಂಬೇಡ್ಕರ್ ಅವರ ವಿಚಾರಧಾರೆಗಳೇ ಇಂದಿನ ಸುಸ್ಥಿರ ಅಭಿವೃದ್ಧಿಗೆ ಮಾರ್ಗದರ್ಶಿಯಾಗಿವೆ ಎಂದರು.
ಅಭಿವೃದ್ಧಿ ಯೋಜನೆಗಳ ಅನುಷ್ಟಾನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಾರ್ಯನೀತಿಯನ್ನು ಅಳವಡಿಸಿಕೊಳ್ಳುವುದರ ಬಗ್ಗೆ ಸಂಶೋಧನೆಯನ್ನು ಕೈಗೊಳ್ಳಬೇಕಾಗಿದೆ. ಅಭಿವೃದ್ಧಿಯ ಮೂಲತಳಹದಿ ಬೇರೆ ಬೇರೆ ವೇದಿಕೆಗಳ ಸಮನ್ವಯ ಹೊಂದಿಸಿ ಸಂಶೋಧನೆಗಳನ್ನು ಕೈಗೊಂಡು ಅವರ ವಿಚಾರಧಾರೆಗಳನ್ನು ಸಮಾಜಕ್ಕೆ ತಿಳಿಸಿ ಕೊಡುವ ಮತ್ತು ಅಳವಡಿಸಿಕೊಳ್ಳುವ ಕಾರ್ಯ ಆಗಲೇ ಬೇಕಾಗಿದೆ. ಅಂಬೇಡ್ಕರ್ ಅವರ ಚಿಂತನೆಗಳ ಪ್ರಸ್ತುತತೆ ಕುರಿತು ಚಿಂತನೆ ಸಂಶೋಧನೆಗಳು ನಡೆಯಬೇಕು ಎಂದೂ ಅವರು ಸಲಹೆ ಮಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಲಸಚಿವ ಪ್ರೊ.ಬಿ.ಎಸ್.ನಾವಿ ಅವರು ಮಾತನಾಡಿ, ಜಗತ್ತು ಕಂಡ ಮಹಾಮಾನವತಾವಾದಿ ಅಂಬೇಡ್ಕರ್ ಅವರ ಕೊಡುಗೆಗಳು ಅಗಣಿತವಾಗಿರುತ್ತವೆ. ಅಂಬೇಡ್ಕರ್ ಅವರು ಅನೇಕ ಕ್ಷೇತ್ರಗಳಲ್ಲಿ ವಿವಿಧ ಆಯಾಮಗಳಲ್ಲಿ ಕೊಡುಗೆಗಳನ್ನು ನೀಡಿದ್ದಾರೆ. ಪುಸ್ತಕ ಪ್ರೇಮಿ, ಜ್ಞಾನದ ಗಣಿಯಾಗಿದ್ದರು. ಮುಳ್ಳಿನ ಹಾಸಿಗೆಯಿಂದ ಜೀವನ ಶಿಕ್ಷಣವನ್ನು ಪಡೆಯಲು ಶ್ರಮಿಸಿ ವಿಶ್ವವೇ ಮೆಚ್ಚುವ ಜ್ಞಾನಿಯಾಗಿ ಹೊರಹೊಮ್ಮಿದರು ಎಂದು ಬಣ್ಣಿಸಿದರು.
ಅಂಬೇಡ್ಕರ್ ರವರು ಬಾಲ್ಯದಿಂದಲೇ ಪ್ರತಿಭಾವಂತರಾಗಿದ್ದರು ಮತ್ತು ವಿದೇಶಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಅನೇಕ ವಿಷಯಗಳ ಮೇಲೆ ಪರಿಣಿತಿಯನ್ನು ವಿದ್ವತ್ವವನ್ನು ಪಡೆದವರು. ಅನೇಕ ಸಂಘಟನೆಗಳನ್ನು ನಿರ್ಮಿಸುವುದರೊಂದಿಗೆ ವಿವಿಧ ಅವೈಜ್ಞಾನಿಕ ಆಚಾರ ವಿಚಾರಗಳನ್ನು ತಡೆಗಟ್ಟುವಲ್ಲಿ ಶ್ರಮಿಸಿದ್ದಾರೆ. ಮೂಲಭೂತ ಸೌಲಭ್ಯಗಳಿಗೆ ಅತಿಹೆಚ್ಚಿನ ಆದ್ಯತೆಯನ್ನು ನೀಡಬೇಕು. ಇದರಿಂದ ಪ್ರಬುದ್ಧ ಭಾರತವನ್ನು ನಿರ್ಮಿಸಲು ಸಾಧ್ಯ ಎಂಬ ಅಂಬೇಡ್ಕರ್ ರವರ ವಿಚಾರ ಇಂದಿಗೂ ಅತ್ಯಂತ ಪ್ರಸ್ತುತ ಎಂದು ಅವರು ಹೇಳಿದರು
ಮೌಲ್ಯಮಾಪನ ಕುಲಸಚಿವ ಪ್ರೊ.ಹೆಚ್.ಎಮ್.ಚಂದ್ರಶೇಖರ್ ಮಾತನಾಡಿ, ಅಂಬೇಡ್ಕರ್ ಅವರು ದೇಶ ವಿದೇಶಗಳಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದಾರೆ ಮೇಕರ್ಸ್ ಆಫ್ ಯೂನಿವರ್ಸ್ ಪುಸ್ತಕದಲ್ಲಿ ಮೊದಲ 100 ಜನರ ಸಾಲಿನಲ್ಲಿ ನಾಲ್ಕನೇಯ ಮಹಾನ್ ವ್ಯಕ್ತಿಯಾಗಿ ಬಾಬಾ ಸಾಹೇಬರನ್ನು ಗುರುತಿಸಿರುತ್ತಾರೆ. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತ ಎಂದು ಹೇಳಿದರು .
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಘಟಕದ ನಿರ್ದೇಶಕಿ ಪ್ರೊ. ಲಕ್ಷ್ಮಿದೇವಿ ವೈ. ಮಾತನಾಡಿ, ಶ್ರೇಷ್ಠ ಜೀವಪರ ತಜ್ಞ, ಸಾಮಾಜಿಕ ನ್ಯಾಯವಾದಿಯಾಗಿದ್ದ ಡಾ.ಅಂಬೇಡ್ಕರ್ ಸಮಾಜಕ್ಕೆ ನೀಡಿದ ಕೊಡುಗೆ ಅವರ್ಣನೀಯ ಎಂದರು.
ಅವರ ಜನ್ಮದಿನದಂದು ನಮ್ಮನ್ನು ಪುನರ್ ವಿಮರ್ಶೆ ಮಾಡಿಕೊಳ್ಳುವ ಸಂದರ್ಭ, ಅವರ ಕೊದುಗೆಯಾದ ಸಂವಿಧಾನ ದಲ್ಲಿ ವಿವಿಧ ಕಲಂಗಳು ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವಂತಹ ಅವಕಾಶವನ್ನು ಒದಗಿಸಲಾಗಿದೆ. ದೀನದಲಿತರ ಹಿಂದುಳಿದವರು ಎಲ್ಲಾ ವರ್ಗದವರು ಸಮಾನತೆಯಿಂದ ಬದುಕಲು ಅವಕಾಶ ಮಾಡಿಕೊಟ್ಟವರು ಡಾ|| ಬಿ ಆರ್ ಅಂಬೇಡ್ಕರ್ ಅವರು. ಎಂದು ಹೇಳಿದರು.
ಡಾ.ಬಿ.ರ್.ಅಂಬೇಡ್ಕರ್ ಜೀವನ ಸಾಧನೆ ಕುರಿತು ವಿವಿಧ ವಿಭಾಗಗಳ ಸಂಶೋಧನಾ ವಿದ್ಯಾರ್ಥಿನಿಯರ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಕೇಂದ್ರದಿಂದ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮುಖಾಂತರ ಜನಸಾಮಾನ್ಯರಲ್ಲಿ ಹಾಗೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳನ್ನು ಮುಟ್ಟಿಸುವಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತವಾಗಿದೆÀ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ನಿಕಾಯಗಳ ಡೀನರು, ಪ್ರಾಧ್ಯಾಪಕರು, ಅಧ್ಯಾಪಕರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿಧ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಲಕ್ಷ್ಮೀ ಗುಡಿಮನಿ ಕಾರ್ಯಕ್ರಮ ನಿರೂಪಿಸಿದರು. ಸುನಿತಾ ಅಡಿವೆಪ್ಪ ವಂದಿಸಿದರು.