ದೇಶದ ವಿವಿಧ ಭಾಗಗಳಲ್ಲಿ ಐಟಿ ದಾಳಿ:100 ಕೋಟಿ ರೂ. ಅಕ್ರಮ ವಹಿವಾಟು ಪತ್ತೆ

ನವದೆಹಲಿ,ನ.22- ದೇಶದ ವಿವಿಧ ಭಾಗಗಳಲ್ಲಿ‌ ಚಿನ್ನ ಮತ್ತು ವಜ್ರದ ಆಭರಣಗಳು ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ನಡೆಸಿದ ದಾಳಿಯಲ್ಲಿ ಇಲ್ಲಿಯವರೆಗೂ 100 ಕೋಟಿಗೂ ಹೆಚ್ಚು ವಹಿವಾಟು ಪತ್ತೆಯಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಶೋಧ ಕಾರ್ಯಾಚರಣೆ ವೇಳೆ 5 ಕೋಟಿಗೂ ಅಧಿಕ ಮೌಲ್ಯದ ಲೆಕ್ಕಕ್ಕೆ ಸಿಗದ ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.

ದಾಳಿಯ ಸಮಯದಲ್ಲಿ ಪತ್ತೆಯಾದ ಹಣಕಾಸಿನ ವಿವರಗಳ ಆಧಾರದ ಮೇಲೆ ಒಟ್ಟು 14 ಬ್ಯಾಂಕ್ ಲಾಕರ್‌ಗಳನ್ನು ತಡೆಹಿಡಿಯಲಾಗಿದೆ. ಇಲ್ಲಿಯವರೆಗೆ, 100 ಕೋಟಿ ರೂ.ಗೂ ಅಧಿಕ ಲೆಕ್ಕವಿಲ್ಲದ ವಹಿವಾಟು ಪತ್ತೆಯಾಗಿದೆ ಎಂದು ಸಚಿವಾಲಯ ತಿಳಿಸಿದೆ.

ಆದಾಯ ತೆರಿಗೆ ಇಲಾಖೆಯು ನವೆಂಬರ್ 17 ರಂದು ಚಿನ್ನ ಮತ್ತು ವಜ್ರದ ಆಭರಣಗಳು ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿರುವ ಕೆಲವು ಗುಂಪುಗಳಿಗೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿತ್ತು.

ಪಾಟ್ನಾ, ಭಾಗಲ್ಪುರ್, ಡೆಹ್ರಿ, ಲಕ್ನೋ ಮತ್ತು ದೆಹಲಿಯಾದ್ಯಂತ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿ ಲೆಕ್ಕಕ್ಕೆ ಸಿಗದ ಆದಾಯದ ವಂಚನೆ, ಸೇರಿದಂತೆ ಹಲವು ದಾಖಲೆ ಪತ್ರ ವಶಪಡಿಸಿಕೊಳ್ಳಲಾಗಿದೆ ಎಂದು ಎಂದು ತಿಳಿಸಿದೆ.