ದೇಶದ ರಕ್ಷಣೆಗೆ ನೌಕಾಪಡೆಯ ಕೊಡುಗೆ ಅನನ್ಯ

ಕಲಬುರಗಿ:ಡಿ.4: ನಮ್ಮ ದೇಶದ ಮೂರು ಕಡೆಗಳಲ್ಲಿ ಸಾಗರವನ್ನೇ ಹೊಂದಿರುವ ಭಾರತಕ್ಕೆ ಭಯೋತ್ಪಾದಕರು, ಶತ್ರುಗಳು ದಾಳಿ ಮಾಡಬಹುದಾಗಿದೆ. ಒಂದು ಕ್ಷಣವೂ ಎಚ್ಚರ ತಪ್ಪದೆ ಭಾರತೀಯ ನೌಕಾಪಡೆ ಮೈಯೆಲ್ಲ ಕಣ್ಣಾಗಿ ಕಾರ್ಯನಿರ್ವಹಿಸುವ ಮೂಲಕ ಸಾಗರಗಳ ಗಡಿಯನ್ನು ಕಾಯುವ ಮೂಲಕ ದೇಶದ ರಕ್ಷಣೆಯ ಕಾರ್ಯವನ್ನು ಮಾಡುತ್ತಿರುವ ನೌಕಾಪಡೆಯ ಕಾರ್ಯ ಅನನ್ಯವಾಗಿದೆ ಎಂದು ಉಪನ್ಯಾಸಕ ಎಚ್.ಬಿ.ಪಾಟೀಲ ಹೇಳಿದರು.
ನಗರದ ಕೊಹಿನೂರ ಪದವಿ ಕಾಲೇಜಿನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಸೋಮವಾರ ಜರುಗಿದ ‘ಭಾರತೀಯ ನೌಕಾಪಡೆ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪಾಕಿಸ್ತಾನಿ ಸೇನೆಯು, 1971ರಲ್ಲಿ ಭಾರತದ ಜೊತೆ ಯುದ್ದ ಸಾರಿದ ಸಮಯದಲ್ಲಿ ಇದೇ ವರ್ಷ ಡಿಸೆಂಬರ್-4ರಂದು ಪಾಕಿಸ್ತಾನದ ಸೇನೆಯನ್ನು ಹಿಮ್ಮೆಟ್ಟಿಸುವಲ್ಲಿ ಭಾರತೀಯ ನೌಕಾಪಡೆ ಪ್ರಮುಖ ಕೊಡುಗೆ ನೀಡಿತು. ಅದರ ಸ್ಮರಣಾರ್ಥವಾಗಿ ಈ ದಿನವನ್ನಾಗಿ ಆಚರಿಸಲಾಗುತ್ತದೆ. ಭೋರ್ಗರೆವ ಕಡಲಲೆಯ ಮೇಲೆ, ಮಳೆ, ಚಳಿ ಎನ್ನದೆ ಹೋರಾಡುವ ನೌಕಾಪಡೆಯ ಸೇವೆ ಮರೆಯುವಂತಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎಚ್.ಬಿ.ಕಂಟೆಗೋಲ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಗಣಮುಖಿ, ಸಮಾಜ ಸೇವಕ ಶಿವಯೋಗಪ್ಪ ಬಿರಾದಾರ ಸೇರಿದಂತೆ ಮತ್ತಿತರರಿದ್ದರು.