ದೇಶದ ಯುವ ಸಮುದಾಯದತ್ತ ಇಡೀ ವಿಶ್ವದ ಚಿತ್ತ: ಮೋದಿ

ಚೆನ್ನೈ,ಜು.೨೯- ದೇಶದ ಯುವ ಸಮುದಾಯವನ್ನು ಇಡೀ ವಿಶ್ವ ಭಾರತದ ಕಡೆ ಭರವಸೆಯಿಂದ ಎದುರು ನೋಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಹೇಳಿದ್ದಾರೆ.
ದೇಶದ ಯುವಜನತೆ ಭಾರತದ ಬೆಳವಣಿಗೆಯ ಪ್ರಮುಖ ಎಂಜಿನ್ ಜೊತೆಗೆ ಭಾರತ, ವಿಶ್ವದ ಬೆಳವಣಿಗೆಯ ಎಂಜಿನ್ ಕೂಡ ಎಂದು ಅವರು ಹೇಳಿದ್ದಾರೆ.
ಅಣ್ಣಾ ವಿಶ್ವವಿದ್ಯಾಲಯದ ೪೨ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಮತ್ತು ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪದವಿ ಪಡೆದ ದಿನ ಇಂದು ಸಾಧನೆಯ ದಿನ ಮಾತ್ರವಲ್ಲ, ಭವಿಷ್ಯದ ಕನಸಿನ ಆಕಾಂಕ್ಷೆಯ ದಿನವೂ ಕೂಡ, ನಮ್ಮ ಯುವಕರ ಎಲ್ಲಾ ಕನಸುಗಳು ನನಸಾಗಲಿ ಎಂದು ಹಾರೈಸಿದ್ದಾರೆ.
ದೇಶದ ಶಿಕ್ಷಕರಿಗೆ ಮತ್ತು ಇತರ ಸಿಬ್ಬಂದಿ ದೇಶ ನಿರ್ಮಾಣದ ಪಾಲುದಾರರು ನಾಳೆಯ ನಾಯಕರನ್ನು ಹುಟ್ಟ ಹಾಕುವ ಸಾಧಕರು ಎಂದು ಗುಣಗಾನ ಮಾಡಿದ್ದಾರೆ.
ವಿಜ್ಞಾನಿಗಳಿಗೆ ಅಭಿನಂದನೆ:
ಶತಮಾನಕ್ಕೆ ಒಮ್ಮೆ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗ, ಈ ಬಾರಿ ಕೋವಿಡ್ ಮಾದರಿಯಲ್ಲಿ ಕಾಣಿಸಿಕೊಂಡಿದೆ. ಭಾರತ ಮಾತ್ರವಲ್ಲ ಜಗತ್ತು ತತ್ತರಿಸಿದೆ. ಇಂತಹ ಸಮಯದಲ್ಲಿ ದೇಶದ ವಿಜ್ಞಾನಿಗಳ ಸಂಶೋಧನೆ ಮಾದರಿ ಎಂದು ಹೇಳಿದ್ದಾರೆ.
ಕೋವಿಡ್ ಯಾರೂ ನಿರೀಕ್ಷಿಸದ ಬಹುದೊಡ್ಡ ಆಘಾತ. ಆದರೂ ಅದನ್ನು ಸಮರ್ಥವಾಗಿ ಎದುರಿಸಿದ್ದೇವೆ. ನಮ್ಮ ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಮತ್ತು ಸಾಮಾನ್ಯ ಜನರಿಗೆ ಧನ್ಯವಾದ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ದೇಶದಲ್ಲಿ ಉದ್ಯಮದ ಪ್ರಗತಿ ಏರಿಕೆಯಾಗಿದೆ. ಕಳೆದ ವರ್ಷ, ಭಾರತ, ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ತಯಾರಕ ಎನ್ನುವ ಹೆಗ್ಗಳಿಕೆ ಪಡೆದಿದೆ.ಕಳೆದ ೬ ವರ್ಷಗಳಲ್ಲಿ, ಮಾನ್ಯತೆ ಪಡೆದ ನವೋದ್ಯಮಗಳ ಸಂಖ್ಯೆ ಶೇ.೧೫ ರಷ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.
ಈ ವೇಳೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್, ಶಿಕ್ಷಣ ಸಚಿವ ಕೆ. ಪೊನ್ಮುಡಿ ಸೇರಿದಂತೆ ಅನೇಕರಿದ್ದರು.