ದೇಶದ ಯುವಕರಿಗೆ ಮೋದಿಯೇ ಗ್ಯಾರಂಟಿ – ಗಾಯಿತ್ರಿ ಸಿದ್ದೇಶ್ವರ್

ಸಂಜೆವಾಣಿ ವಾರ್ತೆ

ಹರಪನಹಳ್ಳಿ.ಏ.೨೩: ಯುವಕರು ಈ ದೇಶದ ಭವಿಷ್ಯ, ಅಂತಹ ಯುವಕರಿಗೆ ಮೋದಿ ಜೀ ಅವರೇ ಒಂದು ನಿಜವಾದ ಗ್ಯಾರಂಟಿ. ಅಗ್ನಿವೀರ್ ನೇಮಕಾತಿ ಮೂಲಕ ಯುವಕರಿಗೆ ಉದ್ಯೋಗ ಕೊಡುವ ಜೊತೆಗೆ ರಾಷ್ಟ್ರ ಪ್ರೇಮ ಜಾಗೃತಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಮೇಕ್ ಇನ್ ಇಂಡಿಯಾ, ಮೇಡ್ ಇನ್ ಇಂಡಿಯಾ, ಸ್ಟ್ರಾಟಪ್ ಇಂಡಿಯಾ, ಮುದ್ರಾ ಯೋಜನೆ ಸೇರಿದಂತೆ ಅನೇಕ ಯೋಜನೆ ಮೂಲಕ ಹೊಸ ಉದ್ಯಮ ಮತ್ತು ಕೋಟ್ಯಂತರ ಉದ್ಯೋಗ ಸೃಷ್ಟಿಗೆ ಕಾರಣೀಕರ್ತರಾಗಿ ಈ ದೇಶದ ಯುವಕರಿಗೆನಿಜವಾದ ಗ್ಯಾರಂಟಿಯಾಗಿದ್ದಾರೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ತಿಳಿಸಿದರು.ಹರಪನಹಳ್ಳಿ ತಾಲೂಕಿನ ಬಾಗಳಿ, ಮೈದೂರು, ಚಿಗಟೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ಮಾಜಿ ಸಚಿವ ಜಿ.ಕರುಣಾಕರರೆಡ್ಡಿ ಅವರ ಜೊತೆ ಮತಯಾಚಿಸಿ ಮಾತಾಡಿದ ಅವರ, ಕಾಂಗ್ರೆಸ್ ಸರ್ಕಾರ ರಾಜ್ಯದ ಜನರಿಗೆ ಸುಳ್ಳಿನ ಗ್ಯಾರಂಟಿ ನೀಡಿದೆ. ಅದೇ ಮೋದಿ ಜೀ ಅವರು ದೇಶದ ಯುವಕರಿಗೆ, ಸಾಮಾನ್ಯ ಜನರಿಗೆ ನಿಜವಾದ ಗ್ಯಾರಂಟಿ ನೀಡಿದ್ದಾರೆ ಎಂದರು.ರಾಜ್ಯ ಸರ್ಕಾರ ನಿರುದ್ಯೋಗಿ ಯುವಕರಿಗೆ ಯುವ ನಿಧಿ ನೀಡುತ್ತೇವೆ ಎಂದು ಹೇಳಿ ಯಾಮಾರಿಸಿದೆ. ಇಲ್ಲಿ ಇರುವ ಎಷ್ಟು ಯುವಕರಿಗೆ ಯುವ ನಿಧಿ ಹಣ ಬಂದಿದೆ ಕೈ ಎತ್ತಿ ನೋಡೋಣ ಎಂದರು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗೆ ಮರುಳಾದರೆ ನಮಗೆ ಮತ್ತು ನಮ್ಮ ಮಕ್ಕಳಿಗೆ ಭವಿಷ್ಯ ಇರುವುದಿಲ್ಲ. ದೇಶದ ರಕ್ಷಣೆ, ನಮ್ಮ ನಿಮ್ಮ ರಕ್ಷಣೆ, ಅಭಿವೃದ್ಧಿಗಾಗಿ ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕಿದೆ. ನೀವೆಲ್ಲರೂ ನನ್ನ ಕ್ರಮ ಸಂಖ್ಯೆ 1, ಹೆಸರು ಗಾಯಿತ್ರಿ ಸಿದ್ದೇಶ್ವರ್, ಗುರುತು ಕಮಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದರೆ ಮೋದಿ ಜೀ ಅವರು ಮತ್ತೊಮ್ಮೆ ಪ್ರಧಾನಿ ಆಗುವುದು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದರು.